ರಸಗುಲ್ಲಾ ಬಹಳ ಜನಪ್ರಿಯವಾದ ಬೆಂಗಾಲಿ ಸಿಹಿ! ಸಾಧಾರಣವಾಗಿ ಎಲ್ಲರೂ ರಸಗುಲ್ಲಾ ಸಕ್ಕರೆಯಲ್ಲಿ ಮಾಡುವುದು! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು! ಹಾಗಾಗಿ ನಾನು ಬೆಲ್ಲದಲ್ಲಿ ಮಾಡುವ ಸುಲಭವಾದ ರೆಸಿಪಿ ಇಲ್ಲಿ ಹಾಕಿದ್ದೇನೆ!
ಮಾಡುವ ವಿಧಾನ:-
ಒಂದು ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಕುದಿಯಲು ಆರಂಭವಾದಾಗ 1/2 ಬಟ್ಟಲು ಗಟ್ಟಿಯಾದ ಮೊಸರು ಹಾಕಿ, ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ ಹಾಲು ಪೂರ್ತಿಯಾಗಿ ಒಡೆಯುವ ತನಕ ಕಲೆಸುತ್ತಿರಿ!

ಹಾಲು ಸಂಪೂರ್ಣವಾಗಿಮೊಸರಿನ ಹಾಗೆ ಆದಾಗ ಒಂದು ಬಟ್ಟೆಯಿಂದ ಶೋಧಿಸಿ! ಗಟ್ಟಿಯಾದ ಪನ್ನೀರ್ ಭಾಗವನ್ನು ಗಂಟು ಕಟ್ಟಿ ಅರ್ಧ ಗಂಟೆ ನೇತು ಹಾಕಿ! ಹಾಲಿನ ನೀರಾದ ಭಾಗವನ್ನು ಚೆಲ್ಲದೆ ರಸಂ, ಸೂಪ್ ಗೆ ಬಳಸಿ! ಇದು ಆರೋಗ್ಯಕ್ಕೆ ಒಳ್ಳೆಯದು!
ಗಟ್ಟಿಯಾದ ಪನ್ನೀರ್ ಅನ್ನು ಚೆನ್ನಾಗಿ ನಾದಿ. ನೀವು ಹೆಚ್ಚು ನಾದಿದಷ್ಟೂ ರಸಗುಲ್ಲಾ ಮೃದುವಾಗಿ ಬರುತ್ತದೆ!

ಗಟ್ಟಿಯಾದ ಪನ್ನೀರಿಗೆ ಒಂದು ಚಿಕ್ಕ ಚಮಚ ಕಾರ್ನ್ ಫ್ಲೋರ್ ಅಥವಾ ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ಮಾಡಿಡಿ. ( ಜಾಮೂನ್ ಉಂಡೆಗಳಂತೆ )
1/4 ಕೇಜಿಯಷ್ಟು ಬೆಲ್ಲ ಪುಡಿ ಮಾಡಿ. 1/4 ಲೀಟರ್ ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಸಂಪೂರ್ಣವಾಗಿ ಕರಗಿದ ನಂತರ ಐದು ನಿಮಿಷ ಕುದಿಯಲು ಬಿಡಿ.
ನಂತರ ಒಂದೊಂದಾಗಿ ಪನ್ನೀರ್ ಉಂಡೆಗಳನ್ನು ಬಿಸಿ ಬೆಲ್ಲದ ಪಾಕದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷ ಕುದಿಸಿ.

ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿ ತಣ್ಣಗಾಗಲು ಬಿಡಿ.
ನಂತರ ಫ್ರಿಡ್ಜ್ ನಲ್ಲಿಟ್ಟು ಸವಿಯಿರಿ!

ಇದು ಹಾಲಿನ ಪದಾರ್ಥವಾಗಿರುವುದರಿಂದ ಮಾಡಿದ ಎರಡು ಮೂರು ದಿನಗಳಲ್ಲಿ ತಿನ್ನಬೇಕು!
ಬೆಲ್ಲ ಇಷ್ಟವಿಲ್ಲದವರು ಇದೇ ರೀತಿ, ಇದೇ ಅಳತೆಯಲ್ಲಿ ಸಕ್ಕರೆ ಹಾಕಿ ಮಾಡಬಹುದು!
ಧನ್ಯವಾದಗಳು !![]()
![]()
![]()