PALAK PANEER MANCHOORIAN ಪಾಲಾಕ್ ಪನ್ನೀರ್ ಮಂಚೂರಿಯನ್
ಮಂಚೂರಿಯನ್ ಎಲ್ಲರಿಗೂ ಇಷ್ಟವಾಗುವ ತಿನಿಸು. ಅದರಲ್ಲೂ ಸ್ವಲ್ಪ ವಿಶೇಷ ರುಚಿಯ ಈ ಪಾಲಾಕ್ ಮತ್ತು ಪನ್ನೀರ್ ಕಾಂಬಿನೇಷಶ್ ನಲ್ಲಿರುವ ಈ ಮಂಚೂರಿಯನ್ ಮಾಡಿ ನೋಡಿ. ಖಂಡಿತಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ!
ಮಾಡುವ ವಿಧಾನ:-
ಎರಡು ಕಟ್ಟು ಪಾಲಾಕ್ ಸೊಪ್ಪು ಬಾಣಲೆಯಲ್ಲಿ ಬೇಯಿಸಿ, ಚೆನ್ನಾಗಿ ನೀರು ಹಿಂಡಿ ರುಬ್ಬಿಡಿ. ನೂರು ಗ್ರಾಂ ಪನ್ನೀರ್ ತುರಿದು, ಪಾಲಾಕ್ ಮಿಶ್ರಣ, ನಾಲ್ಕು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಪುಟ್ಟ ಪುಟ್ಟ ಉಂಡೆ ಮಾಡಿಡಿ.



ಬಟ್ಟಲಿನಲ್ಲಿ 4 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ, ಉಪ್ಪು, ಚಿಟಿಕೆ ಕರಿ ಮೆಣಸಿನ ಪುಡಿ ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ, ಪಾಲಾಕ್ ಪನ್ನೀರ್ ಉಂಡೆಗಳನ್ನು ಅದ್ದಿ ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ, ಕಡಿಮೆ ಉರಿಯಲ್ಲಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.

ಈ ಉಂಡೆಗಳು ಹಾಗೇ ತಿನ್ನಲು ಸಹ ತುಂಬಾ ಚೆನ್ನಾಗಿರುತ್ತದೆ. ಹಾಗೆಂದು ಮಂಚೂರಿಯನ್ ಮಾಡುವ ಮೊದಲೆ ತಿಂದು ಖಾಲಿ ಮಾಡಬೇಡಿ. ಮಂಚೂರಿಯನ್ ಒಗ್ಗರಣೆಗೆ ಹಾಕಲು ಸ್ವಲ್ಪ ಉಳಿಸಿ!
1 ಈರುಳ್ಳಿ, 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1 ಕ್ಯಾಪ್ಸಿಕಂ, 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಟೋಮೇಟೋ ಸಾಸ್, 1 ಚಮಚ ಚಿಲ್ಲಿ ಸಾಸ್, 1 ಚಮಚ ವಿನೆಗರ್, 1/2 ಚಮಚ ಸೋಯಾ ಸಾಸ್ ಹಾಕಿ ಚೆನ್ನಾಗಿ ಕಲೆಸಿ.ನಂತರ 1 ಚಮಚ ಕಾರ್ನ್ ಫ್ಲೋರ್ ಅನ್ನು 2 ಚಮಚ ನೀರಿಗೆ ಹಾಕಿ ಕಲೆಸಿ ಹಾಕಿ, ಕೊನೆಯಲ್ಲಿ ಕರಿದ ಪಾಲಾಕ್ ಉಂಡೆಗಳು, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಪಾಲಾಕ್ ಪನ್ನೀರ್ ಮಂಚೂರಿಯನ್ ಸವಿಯಲು ಸಿದ್ಧ!
ಮಾಡಿದ ತಕ್ಷಣವೇ ತಿಂದರೆ ಈ ಪಾಲಾಕ್ ಮತ್ತು ಪನ್ನೀರ್ ಉಂಡೆಗಳು ಗರಿ ಗರಿಯಾಗಿರುತ್ತದೆ.

ಧನ್ಯವಾದಗಳು ![]()
![]()
![]()
