Tindi Tinisu ಸಿಹಿ ತಿನಿಸುಗಳು

AGRA PETHA ಆಗ್ರಾ ಪೇಠಾ

ಬೂದುಗುಂಬಳ ಕಾಯಿಯಿಂದ ಸುಲಭವಾಗಿ ಮಾಡಬಹುದಾದ ಆಗ್ರಾದ ಜನಪ್ರಿಯ ಪೇಠಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ :-

ಆದಷ್ಟೂ ಬಲಿತಿರುವ ಗಟ್ಟಿಯಾದ ಅರ್ಧ ಕೇಜಿ ಬೂದುಗುಂಬಳ ಕಾಯಿಯನ್ನು ಸಿಪ್ಪೆ, ತಿರುಳು ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ.

ಒಂದು ಬಟ್ಟಲಿನಲ್ಲಿ ನೀರು ಹಾಕಿ 1 ಚಿಟಿಕೆ ಸುಣ್ಣ (ಎಲೆ ಅಡಿಕೆ ಜೊತೆಗೆ ಹಾಕಿಕೊಳ್ಳುವುದು) ಹಾಕಿ ಚೆನ್ನಾಗಿ ಕರಗಿಸಿ ಬೂದುಗುಂಬಳ ಕಾಯಿ ಹೋಳನ್ನು ಹಾಕಿ ಮೂರ್ನಾಲ್ಕು ಗಂಟೆ ನೆನೆಸಿಡಿ. ಹೀಗೆ ಮಾಡುವುದರಿಂದ ಪೇಠಾ ಬೆಳ್ಳಗೆ ಇರುತ್ತದೆ.

ನಂತರ ನಾಲ್ಕೈದು ಬಾರಿ ಚೆನ್ನಾಗಿ ತೊಳೆದು ಫೋರ್ಕ್ ಅಥವಾ ಟೂತ್ ಪಿಕ್ ನಿಂದ ಮೂರ್ನಾಲ್ಕು ಕಡೆ ಚುಚ್ಚಿ ಬೇರೆ ನೀರು ಹಾಕಿ ಕುದಿಯಲು ಇಡಿ. ಹೋಳುಗಳು ಮುಕ್ಕಾಲು ಭಾಗ ಬೆಂದ ಮೇಲೆ ನೀರಿನಿಂದ ತೆಗೆದು 1/4 ಕೇಜಿ ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಸಕ್ಕರೆ ಕರಗುವವರೆಗೆ ತಿರುಗಿಸುತ್ತಾ ಬೇಯಿಸಿ.

ಸಕ್ಕರೆ ಪೂರ್ತಿಯಾಗಿ ಕರಗಿ ಕಡಿಮೆ ಆದಾಗ ಹೋಳುಗಳನ್ನು ತೆಗೆದು ಜಾಲರಿಯ ಮೇಲೆ ಹಾಕಿ ಒಂದು ದಿನ ಪೂರ ಒಣಗಲು ಬಿಡಿ. ಬೇಕಾದರೆ ಫ್ಯಾನ್ ಹಾಕಿದರೆ ಬೇಗ ಗಟ್ಟಿಯಾಗುತ್ತದೆ. ನಂತರ ಫ್ರಿಡ್ಜ್ ನಲ್ಲಿಟ್ಟು ಎರಡು ಮೂರು ದಿನಗಳ ಒಳಗೆ ತಿನ್ನಬಹುದು.

ಈ ರೀತಿ ಮಾಡಿದ ಪೇಠಾಗಳು ಹೊರಗಡೆ ಗಟ್ಟಿಯಾಗಿ ಒಳಗಡೆ ಮೃದುವಾಗಿ, ಸಿಹಿಯಾಗಿ, ಬಾಯಲ್ಲಿ ನೀರೂರಿಸುವ ಹಾಗಿರುತ್ತವೆ.

ಇದೇ ರೀತಿ ನೀವು ಬೇಕಾದರೆ ಕಟ್ಲೆಟ್ ಕಟ್ಟರ್ ಬಳಸಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಸಕ್ಕರೆ ಜೊತೆಗೆ ಕುದಿಸುವಾಗ ನಿಮಗೆ ಇಷ್ಟವಾಗುವ ಫುಡ್ ಕಲರ್ ಬಳಸಿ ಬಣ್ಣ ಬಣ್ಣದ ಆಗ್ರಾ ಪೇಠಾ ಮಾಡಬಹುದು.

ಧನ್ಯವಾದಗಳು

Leave a Reply

Your email address will not be published.