Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BELLADA MYSORE PAK ಬೆಲ್ಲದ ಮೈಸೂರು ಪಾಕ್

ಮೈಸೂರು ಪಾಕ್ ನಮ್ಮ ಕರ್ನಾಟಕದ ಹೆಮ್ಮೆಯ ಸಿಹಿ ತಿಂಡಿ! ಅದರ ರುಚಿಗೆ ಮರುಳಾಗದವರೇ ಇಲ್ಲ! ಈ ಸಿಹಿ ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು. ನಾನು ಬೆಲ್ಲ ಹಾಕಿ ಮಾಡಿದ್ದೇನೆ. ರುಚಿ ಅದ್ಭುತವಾಗಿದೆ. ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು ಈ ರೆಸಿಪಿ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ!ಮಾಡುವ ವಿಧಾನ:-

   

1 3/4 ಲೋಟ ಬೆಲ್ಲ ಪುಡಿ ಮಾಡಿಡಿ/ ತುರಿದಿಡಿ.

1 ಲೋಟ ಕಡಲೇ ಹಿಟ್ಟು ಜರಡಿ ಹಿಡಿದು ಸ್ವಲ್ಪ ಹಸಿ ವಾಸನೆ ಹೋಗಿ ಘಂ ಎಂದು ವಾಸನೆ ಬರುವವರೆಗೆ ಹುರಿದಿಡಿ.

1 3/4 ಲೋಟ ತುಪ್ಪ ಕರಗಿಸಿಡಿ.

   

ಒಂದು ಸ್ವಲ್ಪ ಆಳವಾಗಿರುವ ಆದಷ್ಟೂ ಚೌಕಾರವಾಗಿರುವ ( Suare ) ಟ್ರೇಗೆ ಸ್ವಲ್ಪ ಧಾರಾಳವಾಗಿ ತುಪ್ಪ ಸವರಿಡಿ.

ದಪ್ಪ ತಳದ ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ 1/2 ಲೋಟ ನೀರು ಹಾಕಿ ಕರಗಿಸಿ. ಒಮ್ಮೆ ಶೋಧಿಸಿ ಬೇರೆ ಬಾಣಲೆಯಲ್ಲಿ ಪಾಕ ಮಾಡಲು ಇಡಿ. ಪಕ್ಕದ ಒಲೆಯಲ್ಲಿ ತುಪ್ಪ ಬಿಸಿಯಾಗಲು ಕಡಿಮೆ ಉರಿಯಲ್ಲಿ ಇಡಿ. ತುಪ್ಪ ಬಿಸಿಯಾದ ಮೇಲೆ 1/2 ಭಾಗದಷ್ಟು ತುಪ್ಪ ಹುರಿದ ಕಡಲೇ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲೆಸಿಡಿ. ಹೀಗೆ ಮಾಡುವುದರಿಂದ ಕಡಲೆ ಹಿಟ್ಟು ಪಾಕಕ್ಕೆ ಹಾಕಿದಾಗ ಗಂಟಾಗುವುದಿಲ್ಲ!

   

ಬೆಲ್ಲ ಕುದಿದು ಒಂದೆಳೆ ಪಾಕ ಬಂದಾಗ ಕಡಲೇ ಹಿಟ್ಟಿನ ಮಿಶ್ರಣ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ಕಲೆಸಿ. ಜೊತೆಗೆ ಬಿಸಿ ತುಪ್ಪ ಸ್ವಲ್ಪ ಸ್ವಲ್ಪ ಸೇರಿಸುತ್ತಾ ಕೈಬಿಡದಂತೆ ಕಡಿಮೆ ಉರಿಯಲ್ಲಿ ಕಲೆಸುತ್ತಾ ಇರಿ.

ತುಪ್ಪ ಪೂರ್ತಿಯಾಗಿ ಹಾಕಿ. ಮಿಶ್ರಣ ಒಂದೇ ಉಂಡೆಯಂತೆ ಆಗಿ ಬಾಣಲೆಯ ಅಂಚು ಬಿಡುತ್ತಾ ಬಾ ಣಲೆಯಿಂದ ಮೇಲೆ ನೊರೆ ನೊರೆಯಾಗಿ ಬರಲು ಶುರುವಾದ ತಕ್ಷಣ, ಒಲೆಯಿಂದ ಇಳಿಸಿ. ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ಬೆಚ್ಚಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ಮಿಶ್ರಣವನ್ನು ತಟ್ಟೆಗೆ ಹರಡಿ ಹಾಗೆ ಬಿಟ್ಟರೆ ಮೈಸೂರು ಪಾಕ್ ಚೆನ್ನಾಗಿ ಬರುತ್ತದೆ. ಬರ್ಫಿಗಳ ಹಾಗೆ ಜಾಸ್ತಿ ತಟ್ಟಬೇಡಿ.

ಕಡಲೇ ಹಿಟ್ಟು ಮನೆಯಲ್ಲಿ ಬೀಸಿಸಿರುವ ಹಿಟ್ಟಾದರೆ ಮೈಸೂರು ಪಾಕ್ ಬಣ್ಣ ಚೆನ್ನಾಗಿರುತ್ತದೆ. ಅಂಗಡಿಯಲ್ಲಿ ತಂದಿದ್ದಾದರೆ ಹುರಿಯುವಾಗ ಸ್ವಲ್ಪ ಅರಿಷಿಣ ಹಾಕಬಹುದು!

ಬೆಲ್ಲ ಮತ್ತು ತುಪ್ಪ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ. ಕಡಿಮೆ ಎಂದರೆ 1 1/2 ಲೋಟ ಹೆಚ್ಚು ಎಂದರೆ 2 ಲೋಟ. ನಿಮ್ಮ ರುಚಿಗೆ ತಕ್ಕ ಹಾಗೆ ಮಾಡಿಕೊಳ್ಳಬಹುದು!

ಇದೇ ಅಳತೆ ಇದೇ ವಿಧಾನದಲ್ಲಿ ಬೆಲ್ಲದ ಬದಲು ಸಕ್ಕರೆ ಬೇಕಾದರೆ ಹಾಕಿ ಮಾಡಬಹುದು!

ಧನ್ಯವಾದಗಳು.????

Leave a Reply

Your email address will not be published.