KANCHEEPURAM IDLI & UDDINA VADE ಕಾಂಚೀಪುರಂ ಇಡ್ಲಿ ಮತ್ತು ಉದ್ದಿನ ವಡೆ
ಸಾಧಾರಣವಾಗಿ ಬೆಳಿಗ್ಗೆಯ ತಿಂಡಿಗೆ ಎಲ್ಲರ ಮನೆಯಲ್ಲಿ ಇಡ್ಲಿ ಸಾಂಬಾರ್ ಚಟ್ನಿ ಮಾಡುತ್ತಾರೆ. ಇಡ್ಲಿ ಹಿಟ್ಟು ಉಳಿದಿದ್ದರೆ ಮತ್ತೆ ಮರುದಿನ ಅದೇ ಇಡ್ಲಿ ಮಾಡಿದರೆ ಎಲ್ಲರಿಗೂ ಬೇಸರ. ಹಾಗಿದ್ದರೆ ಹೀಗೆ ಮಾಡಿ ನೋಡಿ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ತಾಜಾ ಹಿಟ್ಟಿನಿಂದ ಹೀಗೆ ಮಾಡುವುದು. ನಾನು ಉಳಿದ ಹಿಟ್ಟಿನಿಂದ ಮಾಡಿರುವುದು. ತುಂಬಾ ಚೆನ್ನಾಗಿರುತ್ತದೆ! ಉಳಿದ, ಹುಳಿಬಂದ ಹಿಟ್ಟು ಖಾಲಿ ಆಗುತ್ತದೆ.
ಮಾಡುವ ವಿಧಾನ :-
1 ಟೇಬಲ್ ಚಮಚ ಕಡಲೇ ಬೇಳೆ 2 ಗಂಟೆ ನೆನೆಸಿಡಿ. ಸಾಧಾರಣವಾಗಿ ಈ ಇಡ್ಲಿಗೆ ಒಗ್ಗರಣೆಗೆ ಕಡಲೇ ಬೇಳೆ ಹಾಕುತ್ತಾರೆ. ಆದರೆ ನಾನು ನೆನೆಸಿ ಹಾಕುತ್ತೇನೆ. ವಯಸ್ಸಾದವರಿಗೆ, ಮಕ್ಕಳಿಗೆ ತಿನ್ನಲು ಸುಲಭವಾಗತ್ತದೆ ಎಂದು.
ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
1/2 ಟೀ ಚಮಚ ಮೆಣಸು, 1 ಟೀ ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.
2 ಹಸಿ ಮೆಣಸಿನಕಾಯಿ, ಚಿಕ್ಕ ತುಂಡು ಶುಂಠಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಗೋಡಂಬಿ ಮುರಿದಿಡಿ. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ.
ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಮೆಣಸು ಜೀರಿಗೆ ಪುಡಿ, ಗೋಡಂಬಿ, ಕರಿಬೇವು, ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ ಹಾಕಿ ಹುರಿದು ತೆಗೆದಿಡಿ.
ಸ್ವಲ್ಪ ತಣ್ಣಗಾದ ಮೇಲೆ ಇಡ್ಲಿ ಹಿಟ್ಟಿಗೆ ಸೇರಿಸಿ. ಕೊತ್ತಂಬರಿ ಸೊಪ್ಪು, ನೆನೆಸಿದ ಕಡಲೇ ಬೇಳೆ, ಚಿಟಿಕೆ ಸೋಡಾ ಹಾಕಿ ಕಲೆಸಿ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಸುರಿದು 15 ನಿಮಿಷ ಹಬೆಯಲ್ಲಿ ಬೇಯಿಸಿದರೆ ರುಚಿಯಾದ ಕಾಂಚೀಪುರಂ ಇಡ್ಲಿ ಸವಿಯಲು ಸಿದ್ಧ! ನಾನು ಕಾಫಿ ಲೋಟದಲ್ಲಿ ಮಾಡಿದ್ದೇನೆ. ಹಲಸಿನ ಎಲೆಯ ಕೊಟ್ಟೆ ಸಿಕ್ಕರೆ ಅದರಲ್ಲೂ ಮಾಡಬಹುದು.

ಉದ್ದಿನ ವಡೆ ಮಾಡುವ ವಿಧಾನ:-
1 ಲೋಟ ಉದ್ದಿನ ಬೇಳೆ ತೊಳೆದು ನಾಲ್ಕು ಗಂಟೆ ನೆನೆಸಿಡಿ. ಉದ್ದಿನ ಬೇಳೆ ನೆಂದಷ್ಟು ವಡೆ ಗರಿ ಗರಿಯಾಗಿ ಬರುತ್ತದೆ. ಹೆಚ್ಚು ನೀರು ಹಾಕದೆ ಆದಷ್ಟೂ ನುಣ್ಣಗೆ ರುಬ್ಬಿ. ಹುರಿದು ತರಿ ತರಿಯಾಗಿ ಪುಡಿ ಮಾಡಿದ 1 ಚಮಚ ಮೆಣಸು, ಜೀರಿಗೆ, ಹೆಚ್ಚಿದ ಹಸಿ ಮೆಣಸಿನ ಕಾಯಿ 2, ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ ಸ್ವಲ್ಪ, ಅರ್ಧ ಚಿಕ್ಕ ಚಮಚ ಇಂಗು, ಹಾಕಿ ಕಲೆಸಿ. ಸ್ವಲ್ಪ ಹಿಟ್ಟು ತೆಗೆದು ಕೊಂಡು, ಬಾಳೆ ಎಲೆ/ ವೀಳೆದೆಲೆ/ದಪ್ಪ ಪ್ಲಾಸ್ಟಿಕ್ ಕಾಗದದ ಮೇಲೆ ವಡೆ ಸ್ವಲ್ಪ ದಪ್ಪಗೆ ತಟ್ಟಿ, ಮಧ್ಯದಲ್ಲಿ ರಂಧ್ರ ಮಾಡಿ, ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದರೆ ಗರಿ ಗರಿಯಾದ ಉದ್ದಿನ ವಡೆ ಸಿದ್ಧ!

ಸಾಂಬಾರ್ ಮಾಡುವ ವಿಧಾನ:-
1 ಲೋಟ ತೊಗರಿ ಬೇಳೆ, 1 ಸಿಪ್ಪೆ ತೆಗೆದು ಹೆಚ್ಚಿದ ಆಲೂಗೆಡ್ಡೆಯನ್ನು 2 ವಿಷಲ್ ಕೂಗಿಸಿಡಿ. 1 ದೊಡ್ಡ ಈರುಳ್ಳಿಯನ್ನು ದೊಡ್ಡ ದೊಡ್ಡದಾಗಿ ಹೆಚ್ಚಿ, ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹುರಿದಿಡಿ.
1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1 ಚಮಚ ಧನಿಯಾ, 1/2 ಈರುಳ್ಳಿ, 10 ಕೆಂಪು/ಬ್ಯಾಡಗಿ ಮೆಣಸಿನ ಕಾಯಿ, 1/4 ಚಮಚ (ಜೀರಿಗೆ+ ಮೆಂತ್ಯ), ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು, 4 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿ, ಬೆಂದ ಬೇಳೆಗೆ ಹಾಕಿ, ಹುರಿದ ಈರುಳ್ಳಿ, ಹುಣಿಸೆ ರಸ, ಉಪ್ಪು, ಚೂರು ಬೆಲ್ಲ, ಸ್ವಲ್ಪ ನೀರು ಹಾಕಿ ಕುದಿಸಿ, ಸಾಸಿವೆ, ಇಂಗು, ಕರಿಬೇವು ಒಗ್ಗರಣೆ ಹಾಕಿದರೆ, ಹೋಟೆಲ್ ಶೈಲಿ ಸಾಂಬಾರ್ ರೆಡಿ!
ಪುದೀನಾ ಚಟ್ನಿ ಮಾಡುವ ವಿಧಾನ:-
1 ಕಟ್ಟು ಪುದೀನಾ, 3 ರಿಂದ 4 ಹಸಿ ಮೆಣಸಿನ ಕಾಯಿ ಎಣ್ಣೆ ಹಾಕಿ ಹುರಿದು, 4 ಚಮಚ ಕಾಯಿ ತುರಿ, 2 ಚಮಚ ಹುರಿಗಡಲೆ, ಉಪ್ಪು, 1/2 ಹಸಿ ಈರುಳ್ಳಿ, 1/2 ಚಮಚ ನಿಂಬೆ ರಸ ಹಾಕಿ ರುಬ್ಬಿ, ಸಾಸಿವೆ ಕರಿಬೇವು ಒಗ್ಗರಣೆ ಹಾಕಿದರೆ, ರುಚಿಕರವಾದ ಪುದೀನಾ ಚಟ್ನಿ ರೆಡಿ!

ಧನ್ಯವಾದಗಳು 🙏🙏🙏
