HALU BAYI ಹಾಲು ಬಾಯಿ
ಹಾಲು ಬಾಯಿ ಸಾಂಪ್ರದಾಯಿಕ ಸಿಹಿ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರಿಗೂ ಇಷ್ಟವಾಗುವ ಸಿಹಿ. ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಮಾಡುವುದು ಸುಲಭ ಕೂಡ.
ಬೇಕಾಗುವ ಸಾಮಗ್ರಿಗಳು:-
ನೆನೆಸಿದ ಅಕ್ಕಿ – ಒಂದು ಲೋಟ
ಬೆಲ್ಲ – ಎರಡು ಲೋಟ ( ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಕೊಳ್ಳಬಹುದು)
ಕಾಯಿ ಹಾಲು – 3 ಲೋಟ
ಏಲಕ್ಕಿ ಪುಡಿ – ಅರ್ಧ ಚಿಕ್ಕ ಚಮಚ
ತುಪ್ಪ – ಒಂದು ಚಿಕ್ಕ ಚಮಚ ( ಬೇಕಾದರೆ )
ಮಾಡುವ ವಿಧಾನ:-
ಅಕ್ಕಿಯನ್ನು ಚೆನ್ನಾಗಿ ತೊಳೆದು ಎರಡು ಗಂಟೆಗಳ ಕಾಲ ನೆನೆಸಿ, ದೋಸೆ ಹಿಟ್ಟಿನ ಹದಕ್ಕೆ ಆದಷ್ಟೂ ನುಣ್ಣಗೆ ರುಬ್ಬಿಡಿ.
ದೊಡ್ಡ ತೆಂಗಿನ ಕಾಯಿ ತುರಿದು ನೀರು ಸೇರಿಸಿ ನುಣ್ಣಗೆ ರುಬ್ಬಿ ಹಾಲು ತೆಗೆದಿಡಿ. ಮತ್ತೆ ಇನ್ನೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಹಾಲು ತೆಗೆದು ಬೇರೆ ಇಡಿ. ಹೀಗೆ ಎರಡು ರುಬ್ಬಿ ಹಾಲು ತೆಗೆದಿಡಿ. ಒಟ್ಟಿನಲ್ಲಿ ಹಾಲಿನ ಅಳತೆ ಮೂರು ಲೋಟದಷ್ಟು ಇರಲಿ.
ಎರಡು ಲೋಟ ಬೆಲ್ಲ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲದ ಪುಡಿಗೆ ತೆಳ್ಳಗಿರುವ ಕಾಯಿ ಹಾಲು ಸೇರಿಸಿ ಕುದಿಯಲು ಇಡಿ. ಬೆಲ್ಲ ಸಂಪೂರ್ಣವಾಗಿ ಕರಗಿದಾಗ, ಗಟ್ಟಿ ಕಾಯಿ ಹಾಲು, ಅಕ್ಕಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ.
ಕೈ ಬಿಡದೆ ಕಡಿಮೆ ಉರಿಯಲ್ಲಿ ಕಲೆಸುತ್ತಾ ಇರಿ. 1 ಚಮಚ ತುಪ್ಪ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ.
ಒದ್ದೆ ಕೈಯಿಂದ ಮುಟ್ಟಿದರೆ ಕೈಗೆ ಮಿಶ್ರಣ ಅಂಟದಿದ್ದರೆ ಹಾಲು ಬಾಯಿ ಸಿದ್ಧವಾಗಿದೆ ಎಂದು ಅರ್ಥ!
ಈಗ ಒಲೆಯಿಂದ ಇಳಿಸಿ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಟ್ಟಿ, ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ನಾನು ಹಾಕಿರುವುದು ಆರ್ಗ್ಯಾನಿಕ್ ಬೆಲ್ಲ. ಅದರಲ್ಲಿ ಯಾವುದೆ ಕಲ್ಲು, ಗಲೀಜು ಇರುವುದಿಲ್ಲ. ಸಾಧಾರಣ ಬೆಲ್ಲ ಹಾಕುವುದಾದರೆ ಬೆಲ್ಲ ಕರಗಿಸಿ, ಸೋಸಿ ಹಾಕಿ. ಆರ್ಗ್ಯಾನಿಕ್ ಬೆಲ್ಲ ಹಾಕಿದ್ದರಿಂದ ಬಣ್ಣ ಅಷ್ಟು ಗಾಢವಾಗಿದೆ. ಇಲ್ಲದಿದ್ದರೆ ಬೆಳ್ಳಗೆ ಇರುತ್ತದೆ.
ತುಪ್ಪ ಬೇಕಾದರೆ ಹಾಕಬಹುದು. ಹಾಕದಿದ್ದರೂ ನಡೆಯುತ್ತದೆ.

ಧನ್ಯವಾದಗಳು 🙏🙏🙏
