ಉಪಹಾರ

MALAGOGARE & MENASINA SARU ಮಳಗೋಗರೆ & ಮೆಣಸಿನ ಸಾರು

MALAGOGARE & MENASINA SARU ಮಳಗೋಗರೆ & ಮೆಣಸಿನ ಸಾರು

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! “ಮಳಗೋಗರೆ” ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ!

ಮಾಡುವ ವಿಧಾನ:-

ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.

3 ಚಮಚ ಉದ್ದಿನ ಬೇಳೆ, 1 ಚಿಕ್ಕ ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ ಕಾಯಿ, ಇಷ್ಟನ್ನು 1 ಚಮಚ ಎಣ್ಣೆ ಹಾಕಿ ಹುರಿದು 3 ಚಮಚ ಒಣ ಕೊಬ್ಬರಿ ತುರಿ ಹಾಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಸ್ವಲ್ಪ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಇಂಗು, ಕರಿಬೇವು, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಒಗ್ಗರಣೆ ಮಾಡಿಡಿ.

ಮಾಡಿಟ್ಟ ಅನ್ನದ ಮೇಲೆ ಮೊದಲು ಉದ್ದಿನ ಬೇಳೆ ಪುಡಿ ಹಾಕಿ, ನಂತರ ಒಗ್ಗರಣೆ, ತುರಿದ ಕೊಬ್ಬರಿ ತುರಿ, ಹುರಿದ ಗೋಡಂಬಿ, ಹೇರಳೆ ಹಣ್ಣಿನ ರಸ ಹಾಕಿ ಕಲೆಸಿದರೆ, ರುಚಿಕರವಾದ, ಆರೋಗ್ಯಕರವಾದ ಮಳಗೋಗರೆ ಸಿದ್ಧ! ಹೇರಳೆ ಹಣ್ಣು ಸಿಗದಿದ್ದರೆ ನಿಂಬೆ ರಸ ಹಾಕಬಹುದು!

ತಮಿಳಿನಲ್ಲಿ “ಮಳಗು” ಎಂದರೆ ಮೆಣಸು ಎಂದು ಅರ್ಥ! ಮೂಲ ರೆಸಿಪಿಯ ಹೆಸರು ಬದಲಾಯಿಸುವುದು ಬೇಡವೆಂದು ನಾನು ಹಾಗೇ ಹೆಸರು ಹಾಕಿದ್ದೇನೆ! ನೀವು ಬೇಕಾದರೆ ಮೆಣಸಿನ ಅನ್ನ ಎಂದು ಕರೆಯಬಹುದು!

ಈ ಮಳಗೋಗರೆಗೆ ಸಾಧಾರಣವಾಗಿ ತುಪ್ಪದ ಒಗ್ಗರಣೆ ಮತ್ತು ಗೋಡಂಬಿ ಹಾಕುವುದು. ಒಣ ಕೊಬ್ಬರಿ ತುರಿ ಕಲೆಸುವಾಗ ಸ್ವಲ್ಪ ಸೇರಿಸಿದರೆ ಚೆನ್ನಾಗಿರುತ್ತದೆ.

ಮೆಣಸಿನ ಸಾರು ಮಾಡುವ ವಿಧಾನ:-

ಮೇಲೆ ಹುರಿಯಲು ಹೇಳಿರುವ ಪದಾರ್ಥಗಳನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಕೊಬ್ಬರಿ ತುರಿ ಬದಲು ಕಾಯಿ ತುರಿ ಹಾಕಿ. 1/4 ಲೋಟ ಹೆಸರು ನುಣ್ಣಗೆ ಬೇಯಿಸಿಡಿ, ಹೆಸರು ಬೇಳೆ ಬೆಂದ ಮೇಲೆ ತುಂಬಾ ಜಾಸ್ತಿ ಆಗುತ್ತೆ. ಹೆಚ್ಚು ಬೇಳೆ ಬೇಡ ಈ ಸಾರಿಗೆ. ಬೆಂದ ಹೆಸರು ಬೇಳೆಗೆ, ರುಬ್ಬಿದ ಮಿಶ್ರಣ ಸ್ವಲ್ಪ ನೀರು, ಉಪ್ಪು ಹಾಕಿ ಕುದಿಸಿ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿದರೆ ಮೆಣಸಿನ ಸಾರು ರೆಡಿ! ಈ ಸಾರಿಗೆ ಹುಣಿಸೆ ರಸ ಹಾಕೋಲ್ಲ. ಬೇಕಾದರೆ ತಿನ್ನುವಾಗ ನಿಂಬೆ ರಸ ಹಾಕಿಕೊಳ್ಳಬಹುದು. ಹಾಗೇ ಕುಡಿಯಲು ಕೂಡಾ ತುಂಬಾ ಚೆನ್ನಾಗಿರುತ್ತೆ.

ನಿಮಗೆ ಆಗಾಗ ಫುಡಿ ಮಾಡಲು ಸಮಯ ಇಲ್ಲದಿದ್ದರೆ ಒಣ ಕೊಬ್ಬರಿ ತುರಿ ಹಾಕಿ ಪುಡಿ ಮಾಡಿ ಫ್ರಿಜ್ಜಿನಲ್ಲಿ ಇಟ್ಟು ಬೇಕಾದಾಗ ಅದೆ ಪುಡಿ ಹಾಕಿ ಮಳಗೋಗರೆ ಮತ್ತು ಮೆಣಸಿನ ಸಾರು ಮಾಡಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.