Tindi Tinisu

DIDEER CHAKKULI ದಿಢೀರ್ ಚಕ್ಕುಲಿ

DIDEER CHAKKULI ದಿಢೀರ್ ಚಕ್ಕುಲಿ

ಚಕ್ಕುಲಿ ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಸುಲಭವಾಗಿ, ಬೇಗನೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಮಾಡುವ ವಿಧಾನ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಸರಿ ಹಾಗಾದರೆ ಬನ್ನಿ ನಮ್ಮ ಚಿಕ್ಕತ್ತೆ ಶ್ರೀಮತಿ ಚೂಡಾ ಶ್ರೀಕಾಂತ್ ಅವರ ಕೈ ರುಚಿ ನಿಮಗೆ ಹೇಳ್ತೀನಿ!

ಬೇಕಾಗುವ ಸಾಮಗ್ರಿಗಳು:-

ಅಕ್ಕಿ ಹಿಟ್ಟು – 4 ಕಪ್
ಹುರಿದ ಉದ್ದಿನ ಬೇಳೆ – 1 ಕಪ್
ಹುರಿಗಡಲೆ – 1/2 ಕಪ್
ಬೆಣ್ಣೆ – 2 ಚಮಚ
ಬಿಳಿ ಎಳ್ಳು – ಎರಡು ಚಮಚ
ಜೀರಿಗೆ – ಒಂದು ಚಮಚ
ಇಂಗು ಪುಡಿ – 1/2 ಚಮಚ
ಖಾರದ ಪುಡಿ – 2 ಚಮಚ ( ಬೇಕಾದರೆ )
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ :-

ಉದ್ದಿನ ಬೇಳೆ ಕಡಿಮೆ ಉರಿಯಲ್ಲಿ ಸಂಪಿಗೆ ಬಣ್ಣ ಬರುವ ಹಾಗೆ ಹುರಿದು, ಆದಷ್ಟು ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ. ಹುರಿಗಡಲೆ ಸಹ ನುಣ್ಣಗೆ ಪುಡಿ ಮಾಡಿಡಿ.

ಒಂದು ಬಟ್ಟಲಿನಲ್ಲಿ ನಾಲ್ಕು ಕಪ್ ಅಕ್ಕಿ ಹಿಟ್ಟು , ಉದ್ದಿನ ಬೇಳೆ ಪುಡಿ, ಹುರಿಗಡಲೆ ಪುಡಿ, ಎಳ್ಳು, ಜೀರಿಗೆ, ಉಪ್ಪು, ಬೆಣ್ಣೆ ಸೇರಿಸಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿ, ನಿಮಗೆ ಬೇಕಾದ ಆಕಾರದಲ್ಲಿ ಒರಳಿನಲ್ಲಿ ಹಿಂಡಿ, ಗರಿ ಗರಿಯಾಗಿ ಕರಿದರೆ, ಸುಲಭವಾಗಿ ಮಾಡಬಹುದಾದ, ನೆನೆಸಿಕೊಂಡಾಗ ಮಾಡಬಹುದಾದ, ಬಾಯಲ್ಲಿ ನೀರೂರಿಸುವ ದಿಢೀರ್ ಚಕ್ಕುಲಿ ಸವಿಯಲು ಸಿದ್ಧ!

ಅಕ್ಕಿ ಹಿಟ್ಟು ಮನೆಯಲ್ಲಿ ಬೀಸಿದ್ದು ಅಥವಾ ಅಂಗಡಿಯಲ್ಲಿ ತಂದ ಒಳ್ಳೆಯ ಬ್ರಾಂಡ್ ಅಕ್ಕಿ ಹಿಟ್ಟು ಉಪಯೋಗಿಸಬಹುದು. ನಾನು ಅಂಗಡಿಯಲ್ಲಿ ತಂದದ್ದು ಉಪಯೋಗಿಸಿದ್ದೇನೆ. ನಾನು ಚಕ್ಕುಲಿ ಮಾಡಲು ಮೂರು ರಂಧ್ರಗಳ ಬಿಲ್ಲೆ ಉಪಯೋಗಿಸಿದ್ದೇನೆ ಬೇಗ ಮಾಡಬಹುದು ಅಂತ.

ಧನ್ಯವಾದಗಳು 🙏🙏🙏

Leave a Reply

Your email address will not be published.