Gojju

IYENGAR PULIYOGARE ಅಯ್ಯಂಗಾರ್ ಪುಳಿಯೋಗರೆ

IYENGAR PULIYOGARE ಅಯ್ಯಂಗಾರ್ ಪುಳಿಯೋಗರೆ

ಪುಳಿಯೋಗರೆ ದಕ್ಷಿಣ ಭಾರತದ ಜನಪ್ರಿಯ ಆಹಾರ! ಹೆಸರು ಕೇಳಿದೊಡನೆ ಬಾಯಲ್ಲಿ ನೀರೂರಿಸುವ ಈ ಗೊಜ್ಜು ಒಮ್ಮೆ ಮಾಡಿಟ್ಟರೆ ಬೇಕಾದಾಗ ಉಪಯೋಗಿಸಬಹುದು. ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸೋದರ ಸಂಬಂಧಿ ಆದ ನನ್ನ ಪತಿ ಜಯರಾಂ ಅವರ ಅಜ್ಜಿ ಶ್ರೀಮತಿ ಸೀತಮ್ಮ ಅವರ ಕೈ ರುಚಿಯ ವಿಧಾನ!

ಇನ್ನೇನು ಶ್ರಾವಣ ಮಾಸ ಹತ್ತಿರ ಬಂತು. ಸಾಲು ಸಾಲು ಹಬ್ಬದ ಸಂಭ್ರಮ! ಗೃಹಿಣಿಯರಿಗೆ ಕೈ ತುಂಬಾ ಕೆಲಸ. ಈ ಗೊಜ್ಜು ಮಾಡಿಟ್ಟರೆ ಬೇಕಾದಾಗ ಅನ್ನ ಮಾಡಿ ಕಲೆಸಿ ತಿನ್ನಬಹುದು!

ಮಾಡುವ ವಿಧಾನ:-

ಖಾರಾ ಪುಡಿಗೆ ಬೇಕಾಗುವ ಸಾಮಾನು:-

ಧನಿಯ – 250 ಗ್ರಾಂ
ಮೆಣಸು – 75 ಗ್ರಾಂ
ಜೀರಿಗೆ – 75 ಗ್ರಾಂ
ಮೆಂತ್ಯ – 30 ಗ್ರಾಂ
ಸಾಸಿವೆ – 50 ಗ್ರಾಂ
ಕೆಂಪು ಮೆಣಸಿನ ಕಾಯಿ – 200 ಗ್ರಾಂ ಬ್ಯಾಡಗಿ ಮೆಣಸಿನಕಾಯಿ – 100 ಗ್ರಾಂ
ಗಟ್ಟಿ ಇಂಗು – 1 ಚಿಕ್ಕ ಡಬ್ಬ

ಧನಿಯ, ಮೆಣಸು, ಜೀರಿಗೆ, ಮೆಂತ್ಯ, ಸಾಸಿವೆ, ಇಂಗು ಇಷ್ಟನ್ನು ಎಣ್ಣೆ ಹಾಕದೆ ಹುರಿದಿಡಿ.

ಮೆಣಸಿನ ಕಾಯಿ ಬಿಸಿಲಿನಲ್ಲಿ ಒಣಗಿಸಿ, ಸ್ವಲ್ಪ ಎಣ್ಣೆ ಹಾಕಿ ಹುರಿದು ತರಿ ತರಿಯಾಗಿ ಪುಡಿ ಮಾಡಿ ಇಡಿ. ಹುರಿದ ಇತರ ಸಾಮಾನುಗಳೊಂದಿಗೆ ಸೇರಿಸಿ ಮತ್ತೆ ಪುಡಿ ಮಾಡಿ ಇಡಿ.

1/4 ಕೇಜಿ ಹುಣಿಸೆ ಹಣ್ಣು, ತೊಳೆದು ಬಿಸಿ ನೀರಲ್ಲಿ 2 ಗಂಟೆ ನೆನೆಸಿಡಿ. ಹೆಚ್ಚು ನೀರು ಹಾಕಬೇಡಿ. ಹುಣಿಸೆ ಹಣ್ಣಿನ ಮೇಲೆ ಒಂದು ಇಂಚು ಇರುವಷ್ಟು ನೀರು ಹಾಕಿದರೆ ಸಾಕು. ನೆಂದ ಹುಣಿಸೆ ಹಣ್ಣು ಕಿವುಚಿ, ಸೋಸಿ ರಸ ತೆಗೆದಿಡಿ.

ಗೊಜ್ಜು ಮಾಡಲು ದಪ್ಪ ತಳದ ಬಾಣಲೆ ಅಥವಾ ಕುಕ್ಕರಿನಲ್ಲಿ 100 ಗ್ರಾಂ ಎಣ್ಣೆ ಹಾಕಿ, ಕಾದ ಮೇಲೆ, ಸಾಸಿವೆ, ಕರಿಬೇವು ಹಾಕಿ, ಹುಣಿಸೆ ರಸ, ಎರಡು ಹಿಡಿ ಉಪ್ಪಿನ ಪುಡಿ, ಒಂದು ಅಚ್ಚು ಪುಡಿ ಮಾಡಿದ ಬೆಲ್ಲ ಹಾಕಿ, ಹಸಿ ವಾಸನೆ ಹೋಗುವವರೆಗೆ ದೊಡ್ಡ ಉರಿಯಲ್ಲಿ, ಆಗಾಗ ಕಲಸುತ್ತಾ ಇರಿ. ನಂತರ ಖಾರದ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಕಡಿಮೆ ಉರಿಯಲ್ಲಿ ಆಗಾಗ ಕಲೆಸುತ್ತಾ ತಟ್ಟೆ ಮುಚ್ಚಿ ಕುದಿಸಿ. ಹಸಿ ವಾಸನೆ ಹೋಗಿ, ಗೊಜ್ಜು ಗಟ್ಟಿಯಾಗಿ ( fruit jam ನಷ್ಟು) ಆದಾಗ ಒಲೆಯಿಂದ ತೆಗೆದು, ತಣ್ಣಗಾದ ಮೇಲೆ ಡಬ್ಬದಲ್ಲಿ ಹಾಕಿ ಹೊರಗಡೆ ಅಥವಾ fridge ನಲ್ಲಿ ಇಟ್ಚರೆ 6 ತಿಂಗಳು ಬೇಕಾದರೂ ಉಪಯೋಗಿಸಬಹುದು. ಇದು ಮೂಲ ಗೊಜ್ಜು.

ಪುಳಿಯೋಗರೆ ಮಾಡುವ ವಿಧಾನ:-

ಉದುರುದುರಾಗಿ ಅನ್ನ ಮಾಡಿ ದೊಡ್ಡ ಪಾತ್ರೆಯಲ್ಲಿ ಹರಡಿ ಇಡಿ.

ಒಣ ಕೊಬ್ಬರಿ ತುರಿದಿಡಿ . ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.

ಬಾಣಲೆಯಲ್ಲಿ 4 ಎಣ್ಣೆ ಹಾಕಿ ಸ್ವಲ್ಪ ಕಡಲೆ ಬೀಜ, ಗೋಡಂಬಿ (ಬೇಕಾದರೆ) ಹುರಿದು ತೆಗೆದಿಡಿ. ನಂತರ ಸಾಸಿವೆ, ಇಂಗು, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ, 2 ಚಮಚ ರಸಂ ಪುಡಿ ( ರಸಂ ಪುಡಿ ಪುಳಿಯೋಗರೆ ಹೆಚ್ಚು ಸ್ಪೈಸಿ ಬೇಕಾದರೆ ಮಾತ್ರ ಸೇರಿಸಿ, ಇಲ್ಲದಿದ್ದರೆ ಗೊಜ್ಜಿನ ಖಾರವೇ ಸಾಕಾಗುತ್ತದೆ) , ನಿಮಗೆ ರುಚಿಗೆ ಬೇಕಾದಷ್ಟು ಗೊಜ್ಜು, ಸ್ವಲ್ಪ ಉಪ್ಪು ಹಾಕಿ ಕಲೆಸಿ ಒಲೆಯಿಂದ ತೆಗೆದು, ಎಳ್ಳಿನ ಪುಡಿ, ಕೊಬ್ಬರಿ ತುರಿ, ಕರಿದ ಕಡಲೆ ಬೀಜ, ಗೋಡಂಬಿ ಹಾಕಿ ಅನ್ನದೊಂದಿಗೆ ಮೃದುವಾಗಿ ಕಲೆಸಿದರೆ, ಘಮ ಘಮಿಸುವ, ಬಾಯಲ್ಲಿ ನೀರೂರಿಸುವ ಅಯ್ಯಂಗಾರ್ ಪುಳಿಯೋಗರೆ ಸವಿಯಲು ಸಿದ್ಧ!

ವಿಶೇಷ ಸೂಚನೆ:-

ಎಳ್ಳು ಹುರಿದು ಪುಡಿ ಮಾಡಿ, ಕೊಬ್ಬರಿ ತುರಿದು ಬೇರೆಯಾಗಿ fridge ನಲ್ಲಿ ಇಟ್ಟು ಬೇಕಾದಾಗ ಗೊಜ್ಜು ಹಾಕಿ ಕಲೆಸಿ.ಎಳ್ಳಿನ ಪುಡಿ, ಕೊಬ್ಬರಿ ತುರಿ ಗೊಜ್ಜಿಗೆ ಹಾಕಿ ಕಲೆಸಿಡಬೇಡಿ. ಕೇವಲ ಗೊಜ್ಜು ಹಾಗೆ ಇಟ್ಚರೆ 6 ತಿಂಗಳು ಉಪಯೋಗಿಸಬಹುದು. ಆದಷ್ಟೂ ಹಳೆಯದಾದ ಕಪ್ಪು ಬಣ್ಣದ ಹುಣಿಸೆ ಹಣ್ಣು ಆಯ್ಕೆ ಮಾಡಿ. ಬಿಳಿ ಎಳ್ಳಿನ ಬದಲು ಕಪ್ಪು ಎಳ್ಳು, ಗುರೆಳ್ಳು ಹುರಿದು ಪುಡಿ ಮಾಡಿ ಬೇಕಾದರೂ ಹಾಕಬಹುದು. ರುಚಿ ಮತ್ತು ಬಣ್ಣ ಇನ್ನೂ ಚೆನ್ನಾಗಿರುತ್ತದೆ. ಉಪ್ಪು ಮತ್ತು ಬೆಲ್ಲ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು.

ಈ ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ನೀವು ಮೊದಲು ಖಾರದ ಪುಡಿ ಮಾಡಿಟ್ಟು, ಮರುದಿನ ಹುಣಿಸೆ ರಸ ತೆಗೆದು ಗೊಜ್ಜು ಮಾಡಬಹುದು.

ಪುಳಿಯೋಗರೆ ಗೊಜ್ಜನ್ನು ಬೇರೆ ಬೇರೆ ತರಹ ಮಾಡುತ್ತಾರೆ, ಇದು ನಮ್ಮ ಮನೆಯ ಶೈಲಿ.

ಧನ್ಯವಾದಗಳು 🙏🙏🙏

Leave a Reply

Your email address will not be published.