SPECIAL VANGIBATH ಸ್ಪೆಷಲ್ ವಾಂಗೀಭಾತ್
ವಾಂಗೀಭಾತ್ ಬದನೆ ಕಾಯಿ ಪ್ರಿಯರ ಇಷ್ಟವಾದ ತಿಂಡಿ. ಅದನ್ನು ಮತ್ತಷ್ಟು ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ!
ಮಾಡುವ ವಿಧಾನ :-
ಒಂದು ದೊಡ್ಡ ಹೋಳು ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ತೆಂಗಿನ ಹಾಲು ತೆಗೆದಿಡಿ.
ಒಂದು ಲೋಟ ಸೋನಾ ಮಸೂರಿ ಅಕ್ಕಿಯನ್ನು ತೊಳೆದು ನೀರು ಸೋರಿ ಹಾಕಿಡಿ.
1/4 ಕೇಜಿ ಹಸಿರು ಬದನೇಕಾಯಿ ಸಣ್ಣಗೆ ಉದ್ದಕೆ ಹೆಚ್ಚಿ ನೀರಿನಲ್ಲಿ ಹಾಕಿಡಿ. ಒಂದು ಆಲೂಗೆಡ್ಡೆ ಸಿಪ್ಪೆ ತೆಗೆದು ಹೆಚ್ಚಿಡಿ. ಸಾಧಾರಣವಾಗಿ ವಾಂಗೀಭಾತ್ ಗೆ ಆಲೂಗೆಡ್ಡೆ ಹಾಕುವುದಿಲ್ಲ. ನಮ್ಮ ಮನೆಯಲ್ಲಿ ಯಾವಾಗಲೂ ಬದನೆ ಕಾಯಿ ಹಾಗೂ ಆಲೂಗೆಡ್ಡೆ ಒಟ್ಟಿಗೆ ಹಾಕಿ ಮಾಡುವುದು.

ಒಂದು ಈರುಳ್ಳಿ ಸಣ್ಣಗೆ ಉದ್ದಕೆ ಹೆಚ್ಚಿಡಿ. ಸ್ವಲ್ಪ ಕರಿಬೇವು ತೊಳೆದಿಡಿ.
ಎರಡು ಚಮಚ ಹುಣಸೆ ಹಣ್ಣಿನ ರಸ ತೆಗೆದಿಡಿ. ಅದರಲ್ಲಿ ಚೂರು ಬೆಲ್ಲ ಹಾಕಿ ಕರಗಿಸಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಒಗ್ಗರಣೆ ಹಾಕಿ, ಈರುಳ್ಳಿ, ಚಿಟಿಕೆ ಅರಿಷಿಣ, ಕರಿಬೇವು, ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ ನಂತರ ಹೆಚ್ಚಿದ ಆಲೂಗೆಡ್ಡೆ ಹಾಕಿ ಫ್ರೈ ಮಾಡಿ. ನಂತರ ಬದನೆ ಕಾಯಿ ಹಾಕಿ ಬಾಡಿಸಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಮಚ ವಾಂಗೀಭಾತ್ ಪುಡಿ, ಒಂದು ಲೋಟ ಅಕ್ಕಿ ಹಾಕಿ ಹುರಿದು, ಹುಣಿಸೆ ರಸ, ಕಾಯಿ ಹಾಲು ಮತ್ತು ನೀರು ಎರಡೂ ಸೇರಿಸಿ ಎರಡು ಲೋಟ ಅಳತೆಯಷ್ಟು ಹಾಕಿ ಚೆನ್ನಾಗಿ ಕಲೆಸಿ.
ಒಂದು ಕುಕ್ಕರಿನ ಬಟ್ಟಲಿನಲ್ಲಿ ಈ ಮಿಶ್ರಣವನ್ನೆಲ್ಲಾ ಹಾಕಿ ಕುಕ್ಕರಿನಲ್ಲಿಟ್ಟು ಒಂದು ತಟ್ಟೆ ಮುಚ್ಚಿ ಮುಚ್ಚಳ ಹಾಕಿ ಮೂರು ಅಥವಾ ನಾಲ್ಕು ವಿಷಲ್ ಕೂಗಿಸಿದರೆ ಬಾಯಲ್ಲಿ ನೀರೂರಿಸುವ ಸ್ಪೆಷಲ್ ವಾಂಗೀಭಾತ್ ಸವಿಯಲು ಸಿದ್ಧ!
ಕೆಲವೊಮ್ಮೆ ಕುಕ್ಕರಿನಲ್ಲಿ ನೇರವಾಗಿ ಒಗ್ಗರಣೆ ಹಾಕಿ ಮಾಡಿದರೆ ತಳ ಸೀದು ಹೋಗುವ ಸಾಧ್ಯತೆ ಇರುತ್ತದೆ. ಹೀಗೆ ಕುಕ್ಕರ್ ಬಟ್ಟಲಿನಲ್ಲಿ ಹಾಕಿ ಕುಕ್ಕರಿನಲ್ಲಿಟ್ಟು ಬೇಯಿಸಿದರೆ ಆ ಯೋಚನೆ ಇರುವುದಿಲ್ಲ.

ಧನ್ಯವಾದಗಳು 🙏🙏🙏
