ಉಪಹಾರ

PALAK KICHDI ಪಾಲಾಕ್ ಕಿಚಡಿ

#ವಿಶ್ವ ಪರಿಸರ ದಿನ #

ಜೂನ್ 5 ವಿಶ್ವ ಪರಿಸರ ದಿನ! ಹಸಿರೆ ಉಸಿರು ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಅವರ ಕೈಲಾದಷ್ಟು ಹಸಿರು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಮನುಷ್ಯ ಚಿನ್ನ, ಕಾರ್, ಬಂಗಲೆ ಇಲ್ಲದೆ ಬದುಕಬಲ್ಲ. ಆದರೆ ಆಹಾರ, ಗಾಳಿ, ನೀರು ಇಲ್ಲದೆ ಬದುಕಲಾರ. ಈ ಸತ್ಯ ಈಗಾಗಲೇ ಎಲ್ಲರಿಗೂ ಅರ್ಥ ಆಗಿದೆ. ಪ್ರತಿಯೊಬ್ಬರೂ ಒಂದೊಂದು ಮರ ನೆಡಬೇಕು ಅಂತ ಕಾನೂನು ಮಾಡಬೇಕು. ಬೆಂಗಳೂರಿನಂತಹ ಮಹಾ ನಗರದಲ್ಲಿ ತಲೆಗೊಬ್ಬರು ಮರ ನೆಡುವುದು ಕಷ್ಟವಾದರೂ ಇರುವ ಜಾಗದಲ್ಲೆ ಮನೆಗೊಂದು ಮರ ನೆಡುವ ಕೆಲಸ ಖಂಡಿತಾ ಮಾಡಬೇಕು. ನಾನು ವರ್ಷದ ಹಿಂದೆ ನೆಟ್ಟ ಹೊಂಗೆ ಮರದ ಸಸಿ ಈಗ ನಗು ನಗುತ್ತಾ ನಾಲ್ಕು ಅಡಿ ಎತ್ತರ ಆಗಿದೆ. ನಮ್ಮ ಮನೆ ಎದುರು ಮೂವತ್ತು ವರ್ಷದ ದೊಡ್ಡ ಸಂಪಿಗೆ ಮರ ಇದ್ದರೂ ಇರುವ ಜಾಗದಲ್ಲೆ ಇನ್ನೊಂದು ಹೊಂಗೆ ಮರ ನೆಟ್ಟು ಪೋಷಣೆ ಮಾಡ್ತಾ ಇದ್ದೀನಿ. ಪ್ರತಿಯೊಬ್ಬರೂ ಅವರವರ ಮನೆ ಮುಂದೆ ಸಾಧ್ಯವಾದರೆ ಒಂದು ಮರ ಬೆಳೆಸಿದರೆ ನಮ್ಮ ವಾತಾವರಣವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾನು ಪಾಲಾಕ್ ಕಿಚಡಿ ಫೋಟೋ ತೆಗೆದ ಹಿನ್ನೆಲೆಯಲ್ಲಿರುವುದು ನಾನು ನೆಟ್ಟ ಹೊಂಗೆ ಮರದ ಫೋಟೋ♥️♥️♥️🙏🙏🙏

PALAK KICHDI ಪಾಲಾಕ್ ಕಿಚಡಿ

ಪಾಲಾಕ್ ಸೊಪ್ಪು ಹಾಕಿ ಮಾಡುವ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ:-

ಮಾಡುವ ವಿಧಾನ:-

ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ, ತೊಳೆದು ಕುದಿಯುವ ನೀರಿನಲ್ಲಿ ತಟ್ಟೆ ಮುಚ್ಚದೆ ಮೂರ್ನಾಲ್ಕು ನಿಮಿಷ ಬೇಯಿಸಿ, ತಕ್ಷಣ ತಣ್ಣೀರಿನಲ್ಲಿ ಹಾಕಿ,( ಹೀಗೆ ಮಾಡುವುದರಿಂದ ಸೊಪ್ಪಿನ ಬಣ್ಣ ಬದಲಾಗುವುದಿಲ್ಲ) ನೀರು ಸೋರಿ ಹಾಕಿ ರುಬ್ಬಿಡಿ.

1 ಅಳತೆ ಬಾಸುಮತಿ ಅಕ್ಕಿ, 1/2 ಅಳತೆ ಹೆಸರುಬೇಳೆ ತೊಳೆದು, 4 ಅಳತೆ ನೀರು ಹಾಕಿ ಬೇಯಿಸಿಡಿ.

1 ಈರುಳ್ಳಿ, 1 ಟೊಮಾಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ಎರಡು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. (ಟೋಮೆಟೋ ಬೇಕಾದರೆ ಸೇರಿಸಬಹುದು)

ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ, ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಅರ್ಧ ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಹೆಚ್ಚಿದ ಟೋಮೆಟೋ, ಹಸಿರು ಮೆಣಸಿನಕಾಯಿ, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ರುಬ್ಬಿದ ಪಾಲಾಕ್ ಸೊಪ್ಪು ಹಾಕಿ ಸ್ವಲ್ಪ ಸಮಯದ ನಂತರ, ಬೇಯಿಸಿದ ಅಕ್ಕಿ ಹೆಸರುಬೇಳೆ ಹಾಕಿ ಚೆನ್ನಾಗಿ ಕಲೆಸಿ, ಬೇಕಾದರೆ ಸ್ವಲ್ಪ ನೀರು ಸೇರಿಸಿ, 1/4 ,ಚಮಚ ಗರಂ ಮಸಾಲೆ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಮೂರ್ನಾಲ್ಕು ನಿಮಿಷ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ, ರುಚಿಯಾದ, ಆರೋಗ್ಯಕರವಾದ ಪಾಲಾಕ್ ಕಿಚಡಿ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.