ಸಿಹಿ ತಿನಿಸುಗಳು

SABBAKKI LADDU ಸಬ್ಬಕ್ಕಿ ಲಡ್ಡು

SABBAKKI LADDU  ಸಬ್ಬಕ್ಕಿ ಲಡ್ಡು

ಎಲ್ಲರಿಗೂ ದುರ್ಗಾಷ್ಟಮಿಯ ಶುಭಾಶಯಗಳು 🙏💐

ಸಬ್ಬಕ್ಕಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ ಇಲ್ಲಿದೆ! ಸಬ್ಬಕ್ಕಿಯಿಂದ ಸಾಧಾರಣವಾಗಿ ಕಿಚಡಿ, ವಡೆ ಇತರ ತಿಂಡಿ ಮಾಡಿರುತ್ತೀರ. ಲಡ್ಡು ಎಂದಾದರೂ ಮಾಡಿದ್ದೀರಾ? ಇಲ್ಲದಿದ್ದರೆ ಈಗ ಮಾಡಿ ನೋಡಿ. ಖಂಡಿತಾ ನಿಮಗೆ ಇಷ್ಟ ಆಗುತ್ತದೆ.

 

ಮಾಡುವ ವಿಧಾನ :-

2 ಅಳತೆ ಗಟ್ಟಿ ಸಬ್ಬಕ್ಕಿಯನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವವರೆಗೆ ಹುರಿದು ತೆಗೆದಿಡಿ. ಸುಮಾರು 25 ರಿಂದ 30 ನಿಮಿಷ ಆಗಬಹುದು. ಈ ರೆಸಿಪಿ ಮಾಡುವಾಗ ಸ್ವಲ್ಪ ತಾಳ್ಮೆ ಬೇಕು. ಹುರಿದ ಸಬ್ಬಕ್ಕಿಯನ್ನು ಒಂದು ಬಾಯಲ್ಲಿ ಹಾಕಿ ಅಗಿದು ನೋಡಿ. ಅದು ಅಂಟದಿದ್ದರೆ ಹದ ಸರಿಯಾಗಿದೆ ಎಂದು ಅರ್ಥ. ಸರಿಯಾಗಿ ಹುರಿಯದೆ ಮಾಡಿದರೆ ಹಲ್ಲಿಗೆ ಅಂಟುತ್ತದೆ. ಕಡಿಮೆ ಉರಿಯಲ್ಲಿ ಹುರಿಯಬೇಕು.

ಹುರಿದ ಸಬ್ಬಕ್ಕಿಯನ್ನು ತಣ್ಣಗಾದ ಮೇಲೆ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ.

1 ಅಥವಾ 1 1/2 ಲೋಟ ಅಳತೆ ಬೆಲ್ಲ/ ಸಕ್ಕರೆ ಪುಡಿ ಮಾಡಿಡಿ. ನಾನು ಬೆಲ್ಲ ಮಿಕ್ಸಿಗೆ ಹಾಕಿ ಪುಡಿ ಹಾಕಿ ಮಾಡಿದ್ದೇನೆ. ಹಾಗಾಗಿ ಚಿನ್ನದ ಬಣ್ಣದ ಲಡ್ಡು ತಯಾರಾಗಿದೆ. ನೀವು ಬೇಕಾದರೆ ಇದೇ ವಿಧಾನದಲ್ಲಿ ಸಕ್ಕರೆ ಹಾಕಿ ಮಾಡಬಹುದು.

ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ 6 ಚಮಚ ತುಪ್ಪ ಹಾಕಿ ಬಾದಾಮಿ, ಗೋಡಂಬಿ ಹಾಕಿ ಹುರಿದು, ನಂತರ ಸಬ್ಬಕ್ಕಿ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಹುರಿದು, ಏಲಕ್ಕಿ ಪುಡಿ, ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.

ಸ್ವಲ್ಪ ಬೆಚ್ಚಗಾದ ನಂತರ ನಿಮಗೆ ಬೇಕಾದ ಅಳತೆಯ ಲಡ್ಡುಗಳನ್ನು ಕಟ್ಟಿ, ಒಣ ಕೊಬ್ಬರಿ ಪುಡಿಯ ( Dessicated coconut powder ಹಾಕಿರುವುದು ನಾನು ) ಮೇಲೆ ಹೊರಳಿಸಿ ತೆಗೆದರೆ ರುಚಿಯಾದ, ಆರೋಗ್ಯಕರವಾದ ಸಬ್ಬಕ್ಕಿ ಲಡ್ಡು ಸವಿಯಲು ಸಿದ್ಧ.

ಅಕಸ್ಮಾತ್ ಲಡ್ಡು ಕಟ್ಟುವುದು ಕಷ್ಟ ಎನಿಸಿದರೆ ಸ್ವಲ್ಪ ನೀರು ಚಿಮುಕಿಸಿ ಲಡ್ಡು ಕಟ್ಟಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.