ಉಪಹಾರ

KANCHIPURAM IDLI ಕಾಂಚೀಪುರಂ ಇಡ್ಲಿ

ಸಾಧಾರಣವಾಗಿ ಬೆಳಿಗ್ಗೆಯ ತಿಂಡಿಗೆ ಎಲ್ಲರ ಮನೆಯಲ್ಲಿ ಇಡ್ಲಿ ಸಾಂಬಾರ್ ಚಟ್ನಿ ಮಾಡುತ್ತಾರೆ. ಇಡ್ಲಿ ಹಿಟ್ಟು ಉಳಿದಿದ್ದರೆ ಮತ್ತೆ ಮರುದಿನ ಅದೇ ಇಡ್ಲಿ ಮಾಡಿದರೆ ಎಲ್ಲರಿಗೂ ಬೇಸರ. ಹಾಗಿದ್ದರೆ ಹೀಗೆ ಮಾಡಿ ನೋಡಿ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ತಾಜಾ ಹಿಟ್ಟಿನಿಂದ ಹೀಗೆ ಮಾಡುವುದು. ನಾನು ಉಳಿದ ಹಿಟ್ಟಿನಿಂದ ಮಾಡಿರುವುದು. ತುಂಬಾ ಚೆನ್ನಾಗಿರುತ್ತದೆ! ಉಳಿದ, ಹುಳಿಬಂದ ಹಿಟ್ಟು ಖಾಲಿ ಆಗುತ್ತದೆ. ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಬಹುದು.

ಮಾಡುವ ವಿಧಾನ :-

1 ಟೇಬಲ್ ಚಮಚ ಕಡಲೇ ಬೇಳೆ 2 ಗಂಟೆ ನೆನೆಸಿಡಿ. ಸಾಧಾರಣವಾಗಿ ಈ ಇಡ್ಲಿಗೆ ಒಗ್ಗರಣೆಗೆ ಕಡಲೇ ಬೇಳೆ ಹಾಕುತ್ತಾರೆ. ಆದರೆ ನಾನು ನೆನೆಸಿ ಹಾಕುತ್ತೇನೆ. ವಯಸ್ಸಾದವರಿಗೆ, ಮಕ್ಕಳಿಗೆ ತಿನ್ನಲು ಸುಲಭವಾಗತ್ತದೆ ಎಂದು.

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

1/2 ಟೀ ಚಮಚ ಮೆಣಸು, 1 ಟೀ ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.

2 ಹಸಿ ಮೆಣಸಿನಕಾಯಿ, ಚಿಕ್ಕ ತುಂಡು ಶುಂಠಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಗೋಡಂಬಿ ಮುರಿದಿಡಿ.

ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಮೆಣಸು ಜೀರಿಗೆ ಪುಡಿ, ಗೋಡಂಬಿ, ಕರಿಬೇವು, ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ ಹಾಕಿ ಹುರಿದು ತೆಗೆದಿಡಿ.

ಸ್ವಲ್ಪ ತಣ್ಣಗಾದ ಮೇಲೆ ಇಡ್ಲಿ ಹಿಟ್ಟಿಗೆ ಸೇರಿಸಿ. ಕೊತ್ತಂಬರಿ ಸೊಪ್ಪು, ನೆನೆಸಿದ ಕಡಲೇ ಬೇಳೆ, ಚಿಟಿಕೆ ಸೋಡಾ ಹಾಕಿ ಕಲೆಸಿ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಸುರಿದು 15 ನಿಮಿಷ ಹಬೆಯಲ್ಲಿ ಬೇಯಿಸಿದರೆ ರುಚಿಯಾದ ಕಾಂಚೀಪುರಂ ಇಡ್ಲಿ ಸವಿಯಲು ಸಿದ್ಧ!

ಧನ್ಯವಾದಗಳು

Leave a Reply

Your email address will not be published.