ಮಾಡುವ ವಿಧಾನ :-
ದೋಸೆ ಅಕ್ಕಿ – 3 ಲೋಟ
ಉದ್ದಿನ ಬೇಳೆ – 1 ಲೋಟ
ತೊಗರಿ ಬೇಳೆ- 1 ಚಮಚ
ಮೆಂತ್ಯ – 1 ಚಮಚ
ಗಟ್ಟಿ ಅವಲಕ್ಕಿ / ಅನ್ನ – 4 ಚಮಚ
( ನಾವು ಅನ್ನ ರುಬ್ಬುವುದಿಲ್ಲ, ಹಾಗಾಗಿ ಅವಲಕ್ಕಿ ಹಾಕಿದ್ದೇನೆ)
ಎಲ್ಲ ಪದಾರ್ಥಗಳನ್ನು ತೊಳೆದು ಬೇರೆ ಬೇರೆಯಾಗಿ 3 ಗಂಟೆ ಕಾಲ ನೆನೆಸಿಡಿ. ನಂತರ ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಹುದುಗು ಬರಲು ಬಿಡಿ.
ಮರುದಿನ ಚಿಟಿಕೆ ಸಕ್ಕರೆ ಸೇರಿಸಿ ಕಾದ ಕಾವಲಿಯ ಮೇಲೆ ಸ್ವಲ್ಪ ದಪ್ಪವಾಗಿ ದೋಸೆ ಹರಡಿ 1 ಚಮಚ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ 1 ನಿಮಿಷ ಬೇಯಿಸಿ.
ನಂತರ ಸ್ವಲ್ಪ ಚಟ್ನಿ ಪುಡಿ ದೋಸೆಯ ಮೇಲೆ ಉದುರಿಸಿ, ಮಧ್ಯದಲ್ಲಿ ಆಲೂ ಗೆಡ್ಡೆ ಪಲ್ಯ ಇಟ್ಟು, ಸುತ್ತಲೂ ಸ್ವಲ್ಪ ಕಾಯಿ ತುರಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ಪಲ್ಯದ ಮೇಲೆ 1 ಚಮಚ ಬೆಣ್ಣೆ ಇಟ್ಟು ತೆಗೆದು ಚಟ್ನಿಯೊಂದಿಗೆ ಬಡಿಸಿ.
ಈ ದೋಸೆ ಒಂದು ಕಡೆ ಮಾತ್ರ ಬೇಯಿಸುವುದು. ದೋಸೆ ಮಾಡುವಾಗ ಸ್ವಲ್ಪ ದಪ್ಪಗೆ ಮಾಡಬೇಕು. ಓಪನ್ ದೋಸೆ ದಪ್ಪಗಿದ್ದರೇನೇ ಚೆಂದ!
ಕಾಯಿ ಚಟ್ನಿ ಮಾಡುವ ವಿಧಾನ:-
1/2 ಹೋಳು ಕಾಯಿ ತುರಿದಿಡಿ. 2 ಚಮಚ ಕಡಲೇಬೀಜ ಹುರಿದು ಸಿಪ್ಪೆ ತೆಗೆದಿಡಿ. 2 ಹಸಿ ಮೆಣಸಿನಕಾಯಿ, 2 ಎಸಳು ಬೆಳ್ಳುಳ್ಳಿ, 1/4 ಇಂಚು ಶುಂಠಿ, 4 ಅಥವಾ 5 ತುಂಡು ಈರುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.
ಎಲ್ಲವನ್ನೂ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು , ನಿಂಬೆ ರಸ ಹಾಕಿ ಇನ್ನೊಂದು ಬಾರಿ ಸುತ್ತಿ, ಒಗ್ಗರಣೆ ಹಾಕಿದರೆ ಕಾಯಿ ಚಟ್ನಿ ರೆಡಿ!
ಹುರಿಗಡಲೆ ಚಟ್ನಿ ಪುಡಿ ಮಾಡುವ ವಿಧಾನ:-
4 ಚಮಚ ಒಣ ಕೊಬ್ಬರಿ ತುರಿದಿಡಿ.
ಖಾರಾ ನಿಮಗೆ ಬೇಕಾಗುವಷ್ಟು ಬ್ಯಾಡಗಿ ಮೆಣಸಿನಕಾಯಿ ಎಣ್ಣೆ ಹಾಕಿ ಹುರಿದಿಡಿ.
1 ಚಿಕ್ಕ ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ಸ್ವಲ್ಪ ಬಿಸಿ ಮಾಡಿಡಿ.
1 ಕಡಲೇ ಕಾಳು ಗಾತ್ರದ ಇಂಗು ಬಿಸಿ ಮಾಡಿಡಿ.
1 ಲೋಟ ಹುರಿ ಗಡಲೆ ಮೊದಲು ಪುಡಿ ಮಾಡಿಡಿ.
ಒಣ ಕೊಬ್ಬರಿ ಮತ್ತು ಇತರ ಸಾಮಾನುಗಳನ್ನು , ಉಪ್ಪು ಹಾಕಿ ಪುಡಿ ಮಾಡಿ.
ಒಂದು ದೊಡ್ಡ ತಟ್ಟೆಯಲ್ಲಿ ಎಲ್ಲವನ್ನೂ ಸೇರಿಸಿ ಕಲೆಸಿ, ಮತ್ತೆ ಒಂದು ಬಾರಿ Mixie ಯಲ್ಲಿ ಒಂದೆರಡು ಬಾರಿ ಸುತ್ತಿಸಿದರೆ ರುಚಿಯಾದ ಹುರಿ ಗಡಲೆ ಚಟ್ನಿ ಪುಡಿ ಸಿದ್ಧ!
ಧನ್ಯವಾದಗಳು.





