ಉಪಹಾರ

RAGI HURITTINA UPPITTU ರಾಗಿ ಹುರಿಟ್ಟಿನ ಉಪ್ಪಿಟ್ಟು

RAGI HURITTINA UPPITTU  ರಾಗಿ ಹುರಿಟ್ಟಿನ ಉಪ್ಪಿಟ್ಟು

ರಾಗಿ ದಕ್ಷಿಣ ಭಾರತದ ಜನಪ್ರಿಯ ಸಿರಿ ಧಾನ್ಯ. ಅತಿ ಹೆಚ್ಚು ಜನ ಉಪಯೋಗಿಸುತ್ತಾರೆ. ದೇಹಕ್ಕೆ ತಂಪು, ತೋಳಿಗೆ ಬಲ ಕೊಡುವ ಈ ಪುಟ್ಟ ಕಾಳಿನಲ್ಲಿ ಮಾಡಬಹುದಾದ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ. ಇದು ನನ್ನ ಅಜ್ಜಿ, ಅಮ್ಮ, ಅತ್ತೆ ಮಾಡುತ್ತಿದ್ದ ವಿಧಾನ!

ಮಾಡುವ ವಿಧಾನ :-

ರಾಗಿಯನ್ನು ಚೆನ್ನಾಗಿ ಮೂರ್ನಾಲ್ಕು ಸಲ ತೊಳೆದು ನೀರು ಸೋರಿ ಹಾಕಿ ಒಣಗಿದ ಬಟ್ಟೆಯ ಮೇಲೆ ಹಾಕಿ ನೆರಳಿನಲ್ಲಿ ಒಣಗಿಸಿ. ಪೂರ್ಣವಾಗಿ ಒಣಗಲು ಬಿಡಬೇಡಿ.

ಇನ್ನು ನೀರಿನಂಶ ಸ್ವಲ್ಪ ಇರುವಾಗಲೇ ದಪ್ಪ ತಳದ ಕಬ್ಬಿಣದ ಬಾಣಲೆಯಲ್ಲಿ ಒಂದೊಂದು ಹಿಡಿಯಷ್ಟು ಹಾಕಿ ದೊಡ್ಡ ಉರಿಯಲ್ಲಿ ಹುರಿಯಬೇಕು. ಕಾಳು ಪಟ ಪಟನೆ ಸಿಡಿದು ಅರಳುತ್ತದೆ. ಹೀಗೆ ಎಲ್ಲಾ ರಾಗಿ ಹುರಿದು ಸ್ವಲ್ಪ ಆದರೆ Mixie ಜಾಸ್ತಿ ಇದ್ದರೆ Flour mill ಗೆ ಹಾಕಿ ನುಣ್ಣಗೆ ಪುಡಿ ಮಾಡಿಡಿ. ಈ ಹಿಟ್ಟು ರಾಗಿ ಹುರಿದು ಮಾಡುವುದರಿಂದ ಆರು ತಿಂಗಳಾದರೂ ಚೆನ್ನಾಗಿರುತ್ತದೆ.

ಉಪ್ಪಿಟ್ಟು ಮಾಡುವ ವಿಧಾನ :-

ಒಂದು ಅಳತೆ ಹಿಟ್ಟಿಗೆ ಅರ್ಧ ಅಥವಾ ಮುಕ್ಕಾಲು ಭಾಗ ಮೊಸರು ಅಥವಾ ಹುಣಿಸೆ ನೀರು ಹಾಕಿ ಗಂಟಿಲ್ಲದ ಹಾಗೆ ಉದುರುದುರಾಗಿ ಕಲೆಸಿಡಿ. ನಾನು ಮೊಸರು ಹಾಕಿರುವುದು. ಮೊಸರು, ಹುಣಿಸೆ ರಸ ಎರಡೂ ಬೇಡದವರು ನೀರಿನಲ್ಲಿ ಕಲೆಸಿ ಒಗ್ಗರಣೆಗೆ ಕೊನೆಯಲ್ಲಿ ಸ್ವಲ್ಪ ನಿಂಬೆ ರಸ ಹಾಕಿ ಮಾಡಬಹುದು.

ಒಗ್ಗರಣೆಗೆ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು ಹಾಕಿ ಬಾಡಿಸಿ ನಂತರ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ.

ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಬೇಯಿಸಿದ ಅವರೆ ಕಾಳು, ಕಲೆಸಿಟ್ಟ ರಾಗಿ ಹುರಿಟ್ಟು ಹಾಕಿ ಕಲೆಸಿ ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಹಾಕಿದರೆ ರುಚಿಯಾದ, ಆರೋಗ್ಯಕರವಾದ ರಾಗಿ ಹುರಿಟ್ಟಿನ ಉಪ್ಪಿಟ್ಟು ಸವಿಯಲು ಸಿದ್ಧ.

ಈ ಉಪ್ಪಿಟ್ಟು ಸ್ವಲ್ಪ ತಿಂದರೂ ಹೊಟ್ಟೆ ತುಂಬಿ ಹೋಗುತ್ತದೆ. ಡಯಟ್ ಮಾಡುವವರಿಗೆ, ಮಧು ಮೇಹಿಗಳಿಗೆ, ಹೆಚ್ಚು ಕಷ್ಟದ ಕೆಲಸ ಮಾಡುವವರಿಗೆ ಹೇಳಿ ಮಾಡಿಸಿದ ಹಾಗಿರುತ್ತದೆ.

ರಾಗಿ ಹುರಿಟ್ಟಿನ ಉಂಡೆ.

ಇದೇ ಹಿಟ್ಟಿಗೆ ಕಾಯಿ ತುರಿ, ಬೆಲ್ಲದ ಪುಡಿ, ಸ್ವಲ್ಪ ತುಪ್ಪ ಹಾಕಿ ಕಲೆಸಿ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸಿ. ಉಂಡೆ ಕಟ್ಟುವ ಹದ ಬರುವಷ್ಟು ಹಾಲು ಹಾಕಿ ಪುಟ್ಟ ಪುಟ್ಟ ಉಂಡೆ ಮಾಡಿಡಿ. ಶಾಲೆಯಿಂದ ಮನೆಗೆ ಬಂದ ಮಕ್ಕಳಿಗೆ ತಕ್ಷಣವೇ ಮಾಡಿ ಕೊಡಬಹುದು. ಸುಲಭವಾಗಿ ಮಾಡಬಹುದು. ಆರೋಗ್ಯಕರವಾದ ರುಚಿಯಾದ ಉಂಡೆ ಒಮ್ಮೆ ಮಾಡಿ ನೋಡಿ.

ಇದೇ ಹಿಟ್ಟು ಕಡೆದ ಮಜ್ಜಿಗೆಗೆ ಒಂದು ಚಮಚ ಹಾಕಿ ಚೆನ್ನಾಗಿ ಕಲೆಸಿ ಕುಡಿದರೆ ದೇಹಕ್ಕೆ ತಂಪು ದೊರೆಯುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.