ಉಪಹಾರ

MAVINA KAYI PULIYOGARE ಮಾವಿನ ಕಾಯಿ ಪುಳಿಯೋಗರೆ

ಸಾಧಾರಣವಾಗಿ ಮಾಡುವ ಪುಳಿಯೋಗರೆ ಹುಣಿಸೆ ರಸದಿಂದ ಮಾಡುವುದು. ಈ ಗೊಜ್ಜು ಅದೇ ರೀತಿ ಹುಣಿಸೆ ರಸದ ಬದಲು ಮಾವಿನ ಕಾಯಿ ತುರಿ ಹಾಕಿ ಮಾಡುವುದು.
ಇದು ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು! ಅವರು ಅವರ ತಾಯಿಯಿಂದ ಕಲಿತ ರೆಸಿಪಿ!

ಮಾಡುವ ವಿಧಾನ:-

ಒಂದು ತೋತಾಪುರಿ ಮಾವಿನ ಕಾಯಿ ತೊಳೆದು ಸಿಪ್ಪೆ ತೆಗೆದು ತುರಿದಿಡಿ.

1 ಟೇಬಲ್ ಚಮಚ ಬೆಲ್ಲದ ಪುಡಿ ಮಾಡಿಡಿ.

1 ಟೀ ಚಮಚ ಮೆಂತ್ಯ, 2 ಟೀ ಚಮಚ ಸಾಸಿವೆ ಹುರಿದು ಪುಡಿ ಮಾಡಿಡಿ.

1 ಟೇಬಲ್ ಚಮಚ ಹುಚ್ಚೆಳ್ಳು/ ಗುರೆಳ್ಳು, 1 ಟೇಬಲ್ ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ. ಬಿಳಿ ಎಳ್ಳಿನ ಬದಲುಕಪ್ಪು ಎಳ್ಳು ಬೇಕಾದರೆ ಹಾಕಿಕೊಳ್ಳಬಹುದು.

2 ಚಮಚ ಒಣ ಕೊಬ್ಬರಿ ತುರಿದಿಡಿ.

ಬಾಣಲೆಯಲ್ಲಿ 8 ಟೇಬಲ್ ಚಮಚ ಎಣ್ಣೆ ಹಾಕಿ, ಸ್ವಲ್ಪ ಕಡಲೇ ಬೀಜ, ಗೋಡಂಬಿ ಹುರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, 1 ಟೀ ಚಮಚ ಇಂಗು, ಅರಿಷಿಣ, ಕರಿಬೇವು ಹಾಕಿ ಬಾಡಿಸಿ. ನಂತರ ಮಾವಿನ ತುರಿ, ಉಪ್ಪು, 2 ಟೇಬಲ್ ಚಮಚ ಸಾರಿನ ಪುಡಿ, 1/2 ಟೇಬಲ್ ಚಮಚ ಖಾರದ ಪುಡಿ, ಸಾಸಿವೆ ಮೆಂತ್ಯ ಪುಡಿ, ಕೊಬ್ಬರಿ ತುರಿ, ಬೆಲ್ಲದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಾಡಿಸಿ.

ಕೊನೆಯಲ್ಲಿ ಎಳ್ಳಿನ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ. ಗೊಜ್ಜಿನಿಂದ ಎಣ್ಣೆ ಹೊರಗೆ ಬರಲು ಶುರು ಆದಾಗ ಒಲೆಯಿಂದ ಇಳಿಸಿ ತಣ್ಣಗಾದ ಮೇಲೆ ಡಬ್ಬದಲ್ಲಿ ಹಾಕಿ Fridge ನಲ್ಲಿಡಿ.

ಬೇಕಾದಾಗ ಅನ್ನ ಮಾಡಿ ನಿಮ್ಮ ರುಚಿಗೆ ತಕ್ಕಷ್ಟು ಗೊಜ್ಜು ಹಾಕಿ ಕಲೆಸಿ ಕೊಂಡು ಹುರಿದ ಕಡಲೇ ಬೀಜ, ಗೋಡಂಬಿ ಹಾಕಿದರೆ ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಪುಳಿಯೋಗರೆ ಸಿದ್ಧ!

ಧನ್ಯವಾದಗಳು

Leave a Reply

Your email address will not be published.