ALU PANEER CUTLET ಆಲೂ ಪನ್ನೀರ್ ಕಟ್ಲೆಟ್
ಕಟ್ಲೆಟ್ ಎಲ್ಲರಿಗೂ ಇಷ್ಟವಾಗುವ ತಿಂಡಿ. ಸಂಜೆ ವೇಳೆಗೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಬಿಸಿ ಬಿಸಿ ಏನಾದರೂ ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ.
ಮಾಡುವ ವಿಧಾನ :-
4 ಚಮಚ ಪೇಪರ್ ಅವಲಕ್ಕಿ ತೊಳೆದು ನೀರು ಸೋರಿ ಹಾಕಿ ನುಣ್ಣಗೆ ಪುಡಿ ಮಾಡಿಡಿ.
4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, 1 ಚಮಚ ಚಾಟ್ ಮಸಾಲ, 1/2 ಚಮಚ ಕಪ್ಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ನೆನೆಸಿದ ಅವಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿಡಿ.

4 ಚಮಚ ಅವಲಕ್ಕಿ ನೀರು ಹಾಕದೆ ಪುಡಿ ಮಾಡಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 100 ಗ್ರಾಂನಷ್ಟು ಪನ್ನೀರ್ ತುರಿದಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಪನ್ನೀರ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.
ಆಲೂಗೆಡ್ಡೆ ಮಿಶ್ರಣವನ್ನು ಚಪಾತಿ ಹಿಟ್ಟಿನ ಉಂಡೆಯಷ್ಟು ತೆಗೆದುಕೊಂಡು ಕೈಯಲ್ಲಿ ತಟ್ಟಿ ಮಧ್ಯದಲ್ಲಿ ಪನ್ನೀರ್ ಮಿಶ್ರಣ ಇಟ್ಟು ಎಲ್ಲಾ ಕಡೆ ಮುಚ್ಚಿ ಕಟ್ಲೆಟ್ ಆಕಾರದಲ್ಲಿ ಮಾಡಿ ಅವಲಕ್ಕಿ ಪುಡಿಯಲ್ಲಿ ಹೊರಳಿಸಿ ಕಾದ ಕಾವಲಿಯ ಮೇಲೆ ಸಾಕಷ್ಟು ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಗರಿ ಗರಿಯಾಗಿ ಬೇಯಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಆಲೂ ಪನ್ನೀರ್ ಕಟ್ಲೆಟ್ ಸವಿಯಲು ಸಿದ್ಧ!

ಅವಲಕ್ಕಿ ಪುಡಿಯಲ್ಲಿ ಹೊರಳಿಸುವುದರಿಂದ ಕಟ್ಲೆಟ್ ಗರಿಗರಿಯಾಗುವುದು. ಅವಲಕ್ಕಿಪುಡಿಯ ಬದಲು ಬ್ರೆಡ್ ಕ್ರಂಬ್ಸ್ ಬೇಕಾದರೆ ಉಪಯೋಗಿಸಬಹುದು.

ಹಸಿರು ಚಟ್ನಿ ಮಾಡುವ ವಿಧಾನ :-
1 ದೊಡ್ಡ ಚಮಚ ಕೊತ್ತಂಬರಿ, 1 ದೊಡ್ಡ ಚಮಚ ಪುದೀನಾ, 2 ಹಸಿ ಮೆಣಸಿನಕಾಯಿ, ಉಪ್ಪು, 4 ಚಮಚ ಗಟ್ಟಿಯಾದ ತಾಜಾ ಮೊಸರು ಹಾಕಿ ರುಬ್ಬಿದರೆ ಹಸಿರು ಚಟ್ನಿ ಸವಿಯಲು ಸಿದ್ಧ! ಈ ಚಟ್ನಿ ಸಮೋಸಾ, ಫಿಂಗರ್ ಚಿಪ್ಸ್, ಪ್ಯಾಟೀಸ್ ಈ ತರಹದ ಚಾಟ್ ಗಳ ಜೊತೆಗೆ ಚೆನ್ನಾಗಿರುತ್ತದೆ.
ಧನ್ಯವಾದಗಳು 🙏🙏🙏
