GODHI HITTU BELLADA UNDE ಗೋಧಿ ಹಿಟ್ಟು ಬೆಲ್ಲದ ಉಂಡೆ
ಇನ್ನೇನು ನಾಗರ ಪಂಚಮಿಯ ಹಬ್ಬ ಹತ್ತಿರ ಬಂತು. ಮನೆಯಲ್ಲೆಲ್ಲ ಸಂತೋಷ, ಸಡಗರ ! ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಗೊಳಿಸುವ ಈ ಹಬ್ಬದ ಸಂಭ್ರಮ ಹೆಚ್ಚಿಸಲು ಸುಲಭವಾಗಿ ಮಾಡಬಹುದಾದ ರುಚಿಯಾದ , ಆರೋಗ್ಯಕರವಾದ ಉಂಡೆಯ ರೆಸಿಪಿ ಇಲ್ಲಿದೆ:-
ಗೋಧಿ ಹಿಟ್ಟಿನ ಬೆಲ್ಲದ ಉಂಡೆ
ಬೇಕಾಗುವ ಸಾಮಗ್ರಿಗಳು:-
ಗೋಧಿ ಹಿಟ್ಟು – 2 ಕಪ್
ಬೆಲ್ಲ – 1 1/4 ಅಥವಾ 1 1/2 ಕಪ್
ಕರಗಿಸಿದ ತುಪ್ಪ – ಅರ್ಧ ಕಪ್
ಬಿಳಿ ಎಳ್ಳು – 2 ಚಮಚ
ಗಸಗಸೆ – 2 ಚಮಚ
ಒಣ ಕೊಬ್ಬರಿ ತುರಿ – 4 ಚಮಚ
ಗೋಡಂಬಿ , ಬಾದಾಮಿ, ದ್ರಾಕ್ಷಿ – ಅರ್ಧ ಕಪ್
ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ:-
ಬೆಲ್ಲ ಆದಷ್ಟೂ ಸಣ್ಣಗೆ ಪುಡಿ ಮಾಡಿಡಿ. ನಾನು ಮಿಕ್ಸಿಯಲ್ಲಿ Pulse mode ನಲ್ಲಿ ಪುಡಿ ಮಾಡಿದ್ದು.
ಬಿಳಿ ಎಳ್ಳು , ಗಸಗಸೆ, ಒಣ ಕೊಬ್ಬರಿ ತುರಿ ಬೇರೆ ಬೇರೆ ಹುರಿದಿಡಿ.
ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಗೋಡಂಬಿ ಬಾದಾಮಿ ದ್ರಾಕ್ಷಿ ಹುರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಗೋಧಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಕಡಿಮೆ ಎಂದರೂ ಎಂಟರಿಂದ ಹತ್ತು ನಿಮಿಷ ಗೋಧಿ ಹಿಟ್ಟು ಕಂದು ಬಣ್ಣ ಬರುವವರೆಗೂ, ಕೈ ಬಿಡದೆ ಹುರಿಯಿರಿ. ನಂತರ ಅದಕ್ಕೆ ಉಳಿದ ತುಪ್ಪ ಸೇರಿಸಿ ಎರಡು ನಿಮಿಷ ಹುರಿದು, ಉಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಒಲೆಯಿಂದ ಇಳಿಸಿ ಬೇಗ ಬೇಗನೆ ಚೆನ್ನಾಗಿ ಕಲೆಸಿ, ಸ್ವಲ್ಪ ಬೆಚ್ಚಗಾದ ಮೇಲೆ ಕೈಯಲ್ಲಿ ಒಂದು ಸಲ ಬೆಲ್ಲ ಸಂಪೂರ್ಣವಾಗಿ ಹೊಂದಿಕೊಳ್ಳುವವರೆಗೆ ಗಂಟಿಲ್ಲದ ಹಾಗೆ ಕಲೆಸಿ, ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿದರೆ, ರುಚಿಯಾದ, ಆರೋಗ್ಯಕರವಾದ, ಬಾಯಲ್ಲಿ ನೀರೂರಿಸುವ ಗೋಧಿ ಹಿಟ್ಟು ಬೆಲ್ಲದ ಉಂಡೆ ಸವಿಯಲು ಸಿದ್ಧ!
ಈ ಉಂಡೆ ಮಾಡಿಟ್ಟು ಮಕ್ಕಳ ಲಂಚ್ ಬಾಕ್ಸಿಗೆ ದಿನಾ ಹಾಕಿಕೊಡಬಹುದು. ಅಥವಾ ಶಾಲೆಯಿಂದ ಬಂದ ನಂತರ ತಿನ್ನಲು ಕೊಡಬಹುದು.
ವಿಶೇಷ ಸೂಚನೆ:-
ಉಂಡೆ ಕಟ್ಟಲು ಕಷ್ಟ ಅನಿಸಿದರೆ, ಇನ್ನೂ ಸ್ವಲ್ಪ ಕರಗಿಸಿದ ತುಪ್ಪ ಸೇರಿಸಿ ಕಟ್ಟಬಹುದು. ಆದರೆ ಅಗತ್ಯಕ್ಕಿಂತ ಹೆಚ್ಚು ತುಪ್ಪ ಸೇರಿಸಬೇಡಿ. ತುಪ್ಪ ಜಾಸ್ತಿ ಆದರೆ ಉಂಡೆ ಕಟ್ಟಲು ಆಗುವುದಿಲ್ಲ. ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು. ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ನಾನು ಹಾಕಿರುವುದು ಆರ್ಗ್ಯಾನಿಕ್ ಬೆಲ್ಲ. ಹಾಗಾಗಿ ಬಣ್ಣ ಹೆಚ್ಚು ಗಾಢವಾಗಿದೆ. ಸಾಧಾರಣ ಬೆಲ್ಲ ಹಾಕುವುದಾದರೆ ಒಳ್ಳೆಯ ಗುಣ ಮಟ್ಟದ ಬೆಲ್ಲ ಉಪಯೋಗಿಸಿ. ಬೆಲ್ಲದ ಬದಲು ಸಕ್ಕರೆ ಪುಡಿ ಬೇಕಾದರೂ ಹಾಕಬಹುದು.

ಧನ್ಯವಾದಗಳು 🙏🙏🙏
