PANEER BAJJI/ಪನ್ನೀರ್ ಬಜ್ಜಿ
ಪನ್ನೀರ್ ಪ್ರಿಯರೆ ನೀವು ಸಾಮಾನ್ಯವಾಗಿ ಪನ್ನೀರ್ ಅನ್ನು ಗ್ರೇವಿ, ಮಂಚೂರಿಯನ್, ಕೆಲವು ಸಿಹಿ ತಿಂಡಿಗಳಲ್ಲಿ ತಿಂದಿರಬಹುದು. ಅದರ ರುಚಿಯಾದ ಬಜ್ಜಿ ಮಾಡುವ ರೆಸಿಪಿ ಇಲ್ಲಿದೆ! ಒಮ್ಮೆ ಮಾಡಿ ನೋಡಿ! ಖಂಡಿತಾ ಇನ್ನು ಮುಂದೆ ಆಗಾಗ ಮಾಡಿ ಸವಿಯುತ್ತೀರ.
ಮಾಡುವ ವಿಧಾನ :-
ಪನ್ನೀರ್ ಅನ್ನು ಚಿಕ್ಕದಾಗಿ ಕತ್ತರಿಸಿ ಒಂದೊಂದು ತುಂಡುಗಳನ್ನು ಮಧ್ಯದಲ್ಲಿ ಮುಕ್ಕಾಲು ಭಾಗದವರೆಗೂ ಕತ್ತರಿಸಿಡಿ. ಪನ್ನೀರ್ ತುಂಡುಗಳು ಬೇರೆ ಬೇರೆ ಆಗದ ಹಾಗೆ ಎಚ್ಚರಿಕೆಯಿಂದ ಕತ್ತರಿಸಿಡಿ.
ಎರಡು ಹಿಡಿ ಪುದೀನ, ಎರಡು ಹಿಡಿ ಕೊತ್ತಂಬರಿ ಸೊಪ್ಪು, 3 ಹಸಿ ಮೆಣಸಿನಕಾಯಿ, ಒಂದು ಚಿಕ್ಕ ತುಂಡು ಶುಂಠಿ, 2 ಎಸಳು ಬೆಳ್ಳುಳ್ಳಿ, ಉಪ್ಪು, ಅರ್ಧ ಹೋಳು ನಿಂಬೆ ರಸ ಹಾಕಿ ನುಣ್ಣಗೆ ರುಬ್ಬಿಡಿ.

ರುಬ್ಬಿದ ಪುದೀನಾ ಚಟ್ನಿಯನ್ನು ಕತ್ತರಿಸಿದ ಪನ್ನೀರ್ ಗಳ ಮಧ್ಯದಲ್ಲಿ ತುಂಬಿಸಿಡಿ.

ಒಂದು ಬಟ್ಟಲಿನಲ್ಲಿ ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ಉಪ್ಪು, ಜೀರಿಗೆ, ಖಾರದ ಪುಡಿ 1 ಚಮಚ, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಗರಂ ಮಸಾಲ ಹಾಕಿ ಚೆನ್ನಾಗಿ ಕಲೆಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಒಂದೊಂದಾಗಿ ಪನ್ನೀರ್ ತುಂಡುಗಳನ್ನು ಅದ್ದಿ ಕಡಿಮೆ ಉರಿಯಲ್ಲಿ ಕೆಂಪಗೆ, ಗರಿ ಗರಿಯಾಗುವವರೆಗೆ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ, ಚಟ್ನಿಯೊಂದಿಗೆ ಸವಿಯಿರಿ.


ಧನ್ಯವಾದಗಳು 🙏🙏🙏
