ಖಾರ ತಿನಿಸುಗಳು

GODHI HURIGAALU ಗೋಧಿ ಹುರಿಗಾಳು

ಗೋಧಿ ಕಾಳು ತನ್ನಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಅದರಲ್ಲಿ ನಾರಿನಂಶ ಕೂಡ ಹೇರಳವಾಗಿದೆ. ಇಂತಹ ಗೋಧಿ ಕಾಳಿನ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ!

ಬೇಕಾಗುವ ಸಾಮಗ್ರಿಗಳು :-

ಗೋಧಿ ಕಾಳು – 1 ಕಪ್
ಕಡಲೇ ಬೀಜ – 1 ಕಪ್
ಹುರಿ ಗಡಲೆ – 1/2 ಕಪ್
ಒಣ ಕೊಬ್ಬರಿ ತುಂಡುಗಳು – 1/2ಕಪ್
ಖಾರದ ಪುಡಿ – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು / 1/2 ಟೇಬಲ್ ಚಮಚ
ಇಂಗು ಪುಡಿ – 1 ಟೀ ಚಮಚ
ನಿಂಬುಪ್ಪು – 1 ಟೀ ಚಮಚ
ಕರಿಬೇವು – 4 ಎಸಳು
ಎಣ್ಣೆ – 2 ಟೀ ಚಮಚ

ಮಾಡುವ ವಿಧಾನ :-

ಗೋಧಿ ಕಾಳು ತೊಳೆದು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ ನೀರು ಸೋರಿ ಹಾಕಿ ನೆರಳಲ್ಲಿ ಕಾಟನ್ ಬಟ್ಟೆಯ ಮೇಲೆ ಹಾಕಿ ಒಣಗಿಸಿಡಿ.

ಒಣ ಕೊಬ್ಬರಿ ಸಣ್ಣಗೆ Slice ಮಾಡಿ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.

ಬಾಣಲೆಯಲ್ಲಿ ಎಣ್ಣೆ ಹಾಕದೆ ಗೋಧಿ ಒಂದೊಂದು ಹಿಡಿಯಷ್ಟು ಹಾಕಿ ಕಡಿಮೆ ಉರಿಯಲ್ಲಿ ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.

ಅದೇ ತರಹ ಕಡಲೇ ಬೀಜ/ ಹುರಿ ಗಡಲೆ ( ಪುಟಾಣಿ ) ಹುರಿದು ತೆಗೆದಿಡಿ.

ಒಂದು ಚಿಕ್ಕ ಬಟ್ಟಲಿನಲ್ಲಿ ಖಾರಾ ಪುಡಿ, ಉಪ್ಪು, ನಿಂಬುಪ್ಪು, ಇಂಗು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿಡಿ.

ಹುರಿದ ಗೋಧಿಯನ್ನು ಮತ್ತೆ ಬಾಣಲೆಯಲ್ಲಿ ಹಾಕಿ ಸ್ವಲ್ಪ ಖಾರದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಇನ್ನೂ ಸ್ವಲ್ಪ ಹೊತ್ತು ಹುರಿದು ತೆಗೆದಿಡಿ. ಅದೇ ತರಹ ಕಡಲೇ ಬೀಜ ಮತ್ತು ಹುರಿಗಡಲೆಯನ್ನು ಹಾಕಿ ಸ್ವಲ್ಪ ಖಾರಾ ಮಿಶ್ರಣ ಹಾಕಿ ಹುರಿದಿಡಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಕರಿಬೇವು ಹಾಕಿ ಬಾಡಿಸಿ ತೆಗೆದಿಡಿ. ಅದೇ ಬಾಣಲೆಯಲ್ಲಿ ಒಣ ಕೊಬ್ಬರಿ ತುಂಡುಗಳನ್ನು ಹಾಕಿ ಸ್ವಲ್ಪ ಬಾಡಿಸಿ ಖಾರಾ ಮಿಶ್ರಣ ಹಾಕಿ ಹುರಿದು ತೆಗೆದಿಡಿ.

ಕೊನೆಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ.

ಇದರಲ್ಲಿ ಎಣ್ಣೆ ಅಂಶ ಹೆಚ್ಚಾಗಿಲ್ಲ. ಆರೋಗ್ಯಕರವಾದದಾದು, ರುಚಿಯಾದದ್ದು. ಹಾಗಾದರೆ ನೀವು ಒಮ್ಮೆ ಟ್ರೈ ಮಾಡಿ ನೋಡಿ!

ಧನ್ಯವಾದಗಳು

Leave a Reply

Your email address will not be published.