ಉಪಹಾರ

SET DOSA ಸೆಟ್ ದೋಸಾ

ಹೋಟೆಲ್ ಗಳಲ್ಲಿ ಜನ ಇಷ್ಟ ಪಟ್ಟು ತಿನ್ನುವ ತಿಂಡಿ! ಮಾಡುವ ವಿಧಾನ ಇಲ್ಲಿದೆ ನೋಡಿ!

ಮಾಡುವ ವಿಧಾನ:-

ದೋಸೆ ಅಕ್ಕಿ – 2 ಲೋಟ
ಉದ್ದಿನ ಬೇಳೆ – 1/2 ಲೋಟ
ಗಟ್ಟಿ ಅವಲಕ್ಕಿ – 1/2 ಲೋಟ
ಮೆಂತ್ಯ – 1 ಟೀ ಚಮಚ

ಇಷ್ಟು ಸಾಮಗ್ರಿಗಳನ್ನು ಒಟ್ಟಿಗೆ 4 ಗಂಟೆ ನೆನೆಸಿಡಿ. ಅವಲಕ್ಕಿಯನ್ನು ಮಾತ್ರ ಬೇರೆ 1 ಗಂಟೆ ನೆನೆಸಿದರೆ ಸಾಕು.

ನಂತರ ನುಣ್ಣಗೆ ರುಬ್ಬಿ, ಉಪ್ಪು ಹಾಕಿ ಕಲೆಸಿ, ರಾತ್ರಿ ಪೂರ ಉದುಗು ಬರಲು ಬಿಡಿ.

ಬೆಳಿಗ್ಗೆ ಚಿಟಿಕೆ ಸಕ್ಕರೆ, 1/2 ಟೀ ಚಮಚ ಅಡುಗೆ ಸೋಡಾ ಹಾಕಿ ಕಲೆಸಿ.

ಕಾವಲಿ ಬಿಸಿಯಾಗಲು ಇಡಿ. ದೋಸೆ ಮಿಶ್ರಣದಿಂದ ಒಂದು ಸೌಟು ಹಿಟ್ಟನ್ನು ತೆಗೆದು ಕೊಂಡು ಸ್ವಲ್ಪ ದಪ್ಪಗೆ ದೋಸೆ ಹರಡಿ, ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಿಸಿ.

ನಂತರ ದೋಸೆ ತಿರುವಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಮೃದುವಾದ ಸೆಟ್ ದೋಸೆ ಸಿದ್ಧ!

ಟೋಮೇಟೋ ಚಟ್ನಿ

ಯಾವಾಗಲೂ ಕಾಯಿ ಚಟ್ನಿ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ.

4 ಟೋಮೇಟೋ ಸಣ್ಣಗೆ ಹೆಚ್ಚಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 4 ರಿಂದ 6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.

ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ. ಉಪ್ಪು ಹಾಕಿ ಸ್ವಲ್ಪ ಬಾಡಿಸಿ.

ತಣ್ಣಗಾದ ನಂತರ ಮೆಣಸಿನಕಾಯಿ ಪುಡಿ, ಸ್ವಲ್ಪ ಹುಣಿಸೆ ರಸ ( ಬೇಕಾದರೆ ) ಹಾಕಿ ರುಬ್ಬಿ. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಇನ್ನೊಂದು ಬಾರಿ ರುಬ್ಬಿ.

ಕೊನೆಯಲ್ಲಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಹಾಕಿ ಚಟ್ನಿಗೆ ಸೇರಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಟೋಮೇಟೋ ಚಟ್ನಿ ಸಿದ್ಧ!

Leave a Reply

Your email address will not be published.