ಉಪಹಾರ

HANDVO ಹಾಂಡ್ವೋ

HANDVO ಹಾಂಡ್ವೋ

ಗುಜರಾತಿನ ಜನಪ್ರಿಯ ಆಹಾರ. ಮಾಡುವುದು ಸುಲಭ ! ಬೆಳಿಗ್ಗೆ ಅಥವಾ ಸಂಜೆ ತಿಂಡಿಗೆ ಮಾಡಬಹುದು. ಅಕ್ಕಿ ಮತ್ತು ಬೇಳೆಗಳನ್ನು ಹಾಕುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಕೂಡ.

ಮಾಡುವ ವಿಧಾನ :-

ಒಂದು ಲೋಟ ಅಕ್ಕಿ, ಅರ್ಧ ಲೋಟ ಕಡಲೇ ಬೇಳೆ, ಅರ್ಧ ಲೋಟ ತೊಗರಿ ಬೇಳೆ, ಅರ್ಧ ಹೆಸರು ಬೇಳೆ, ಅರ್ಧ ಉದ್ದಿನ ಬೇಳೆ ಚೆನ್ನಾಗಿ ತೊಳೆದು ಮೂರ್ನಾಲ್ಕು ಗಂಟೆ ನೆನೆಸಿಡಿ.

ನಂತರ ಅರ್ಧ ಕಪ್ ತಾಜಾ ಮೊಸರು ಹಾಕಿ ರುಬ್ಬಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ ರಾತ್ರಿ ಪೂರ ಉದುಗು ಬರಲು ಬಿಡಿ.

ಮರುದಿನ ಒಂದು ಕ್ಯಾರೆಟ್, 1/2 ಸೋರೆ ಕಾಯಿ ( ನಾನು ಪಡವಲ ಕಾಯಿ ಹಾಕಿರೋದು, ಸಾಧಾರಣವಾಗಿ ಸೋರೆಕಾಯಿ ಹಾಕೋದು) ತುರಿದಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 2 ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿ. ಜೊತೆಗೆ ಅರ್ಧ ಚಮಚ ಸಕ್ಕರೆ, 1/4 ಚಮಚ ಖಾರದ ಪುಡಿ, 1/4 ಚಮಚ ಅರಿಷಿಣ ಪುಡಿ ಹಾಕಿ ಚೆನ್ನಾಗಿ ಕಲೆಸಿ. ರಾತ್ರಿ ಹಿಟ್ಟು ರುಬ್ಬಿ ಬೆಳಿಗ್ಗೆ ಮಾಡುವುದಾದರೆ ಸೋಡಾ ಹಾಕುವ ಅವಶ್ಯಕತೆ ಇಲ್ಲ. ಆಗ ರುಬ್ಬಿ ತಕ್ಷಣ ಮಾಡುವುದಾದರೆ ಸ್ವಲ್ಪ ಸೋಡಾ ಸೇರಿಸಿ
ಮಾಡಿ.

Non stick ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಬಿಳಿ ಎಳ್ಳು, ಸ್ವಲ್ಪ ಇಂಗು, ಕರಿಬೇವು ಹಾಕಿ ಸಿಡಿಸಿ ಸ್ವಲ್ಪ ಹಿಟ್ಟು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಐದಾರು ನಿಮಿಷ ಬೇಯಿಸಿ. ನಂತರ ತಿರುವಿ ಹಾಕಿ ಇನ್ನೊಂದು ಕಡೆ ಬೇಯಿಸಿ ತೆಗೆದು ನಿಮಗೆ ಬೇಕಾದ ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ.

ನೀವು ಇದಕ್ಕೆ ನಿಮ್ಮ ಇಷ್ಟದ ತರಕಾರಿ ಅಥವಾ ಸೊಪ್ಪು ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.