MOSARU AKKI THARI UPPITTU & SABUDANA KESARI BATH
ಮೊಸರು ಅಕ್ಕಿ ತರಿ ಉಪ್ಪಿಟ್ಟು ಮತ್ತು ಸಾಬೂದಾನ ಕೇಸರಿ ಬಾತ್:-
ಉಪ್ಪಿಟ್ಟು ಎಲ್ಲರ ಮನೆಯಲ್ಲಿ ಮಾಡುತ್ತಾರೆ. ಮೊಸರು ಹಾಕಿ ಎಂದಾದರೂ ಉಪ್ಪಿಟ್ಟು ಮಾಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಮಾಡಿ ನೋಡಿ! ಹುಳಿ ಖಾರಾ ಉಪ್ಪು Spicy ಉಪ್ಪಿಟ್ಟು. ಉಪ್ಪಿಟ್ಟು ಇಷ್ಟ ಇಲ್ಲದವರೂ ಕೂಡ ಇಷ್ಟ ಪಟ್ಟು ತಿನ್ನುತ್ತಾರೆ.
ಮೊಸರು ಅಕ್ಕಿ ತರಿ ಉಪ್ಪಿಟ್ಟು ಮಾಡುವ ವಿಧಾನ:-
1 ಲೋಟ ಅಕ್ಕಿ ತರಿಗೆ ಸ್ವಲ್ಪ ಉಪ್ಪು, ತಾಜಾ ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಡಿ. ರವೆ ಹುರಿಯುವ ಅಗತ್ಯವಿಲ್ಲ. ರಾತ್ರಿ ಕಲೆಸಿ, ಬೆಳಗ್ಗೆ ಇಡ್ಲಿಯಂತೆ 10 ರಿಂದ 12 ನಿಮಿಷ ಹಬೆಯಲ್ಲಿ ಬೇಯಿಸಿ. ಸ್ವಲ್ಪ ತಣ್ಣಗಾದ ಮೇಲೆ, ಪುಡಿ ಮಾಡಿ ಇಡಿ.


ಬಾಣಲೆಯಲ್ಲಿ ಒಗ್ಗರಣೆಗೆ, 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಚಿಟಿಕೆ ಅರಿಶಿಣ, ಕರಿಬೇವು, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ 8 ರಿಂದ 10 ಹಸಿ ಮೆಣಸಿನ ಕಾಯಿ (ಖಾರಾ ತುಸು ಹೆಚ್ಚು ಬೇಕು), ಸ್ವಲ್ಪ ಉಪ್ಪು (ಸ್ವಲ್ಪವೇ ಸಾಕು, ಹಿಟ್ಟಿಗೆ ಕೂಡ ಹಾಕಿದ್ದೇವೆ) ಹಾಕಿ, ನಂತರ ಪುಡಿ ಮಾಡಿದ ಅಕ್ಕಿ ತರಿ ಹಾಕಿ, ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿ, ಕೊನೆಯಲ್ಲಿ ಕಾಯಿ ತುರಿ, ಕೊತ್ತಂಬರಿ ಸೊಪ್ಪು, (ನಿಂಬೆ ರಸ ಬೇಕಾದರೆ) ಹಾಕಿ, ಚಟ್ನಿ, ಮೊಸರು ಜೊತೆ ಬಡಿಸಿ. ನಿಮಗೆ ಉಪ್ಪಿಟ್ಟು ಮೆತ್ತಗೆ ಬೇಕೆಂದರೆ ಒಗ್ಗರಣೆ ಹಾಕುವಾಗ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ಮೊಸರು ಹಾಕಿರುವುದರಿಂದ ಸ್ವಲ್ಪ ರುಚಿ ವಿಭಿನ್ನವಾಗಿರುತ್ತೆ! ಒಮ್ಮೆ ಮಾಡಿ ನೋಡಿ.


ಸಾಬೂದಾನ ಕೇಸರಿ ಬಾತ್
ಕೇಸರಿ ಬಾತ್ ಎಲ್ಲರಿಗೂ ಇಷ್ಟವಾಗುವ ಸಿಹಿ. ಮಾಡುವುದು ಸುಲಭ ಕೂಡ! ಸಾಬೂದಾನ ಕೇಸರಿ ಬಾತ್ ಇನ್ನೂ ಚೆನ್ನಾಗಿರುತ್ತದೆ. ಮಕ್ಕಳಿಗಂತೂ ತುಂಬಾ ಇಷ್ಟ ಆಗುತ್ತದೆ.
ಮಾಡುವ ವಿಧಾನ:-
ಒಂದು ಲೋಟ ನೈಲಾನ್ ಸಾಬೂದಾನ ಚೆನ್ನಾಗಿ ತೊಳೆದು ನೀರು ಹಾಕಿ ರಾತ್ರಿ ಪೂರ್ತಿ ನೆನೆಯಲು ಬಿಡಿ.
ಬೆಳಿಗ್ಗೆ ನೀರು ಸೋರಿ ಹಾಕಿಡಿ.

ಸ್ವಲ್ಪ ಬಾದಾಮಿ ಗೋಡಂಬಿ ಸಣ್ಣಗೆ ಹೆಚ್ಚಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ.
ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಗೋಡಂಬಿ ಬಾದಾಮಿ ದ್ರಾಕ್ಷಿ ಹಾಕಿ ಹುರಿದು, ಅರ್ಧ ಲೋಟ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಒಂದು ಲೋಟ ನೀರು, ಚಿಟಿಕೆ ಕೇಸರಿ ಬಣ್ಣ ಹಾಕಿ. ನೀರು ಕುದಿಯಲು ಪ್ರಾರಂಭ ಆದ ತಕ್ಷಣ ಉರಿ ಕಡಿಮೆ ಮಾಡಿ ಸಾಬೂದಾನ ಹಾಕಿ ಮತ್ತೊಂದು ಸಲ ಕಲೆಸಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಮೂರು ಅಥವಾ ನಾಲ್ಕು ನಿಮಿಷ ಬೇಯಿಸಿದರೆ ಬಾಯಲ್ಲಿ ನೀರೂರಿಸುವ ನೈಲಾನ್ ಸಾಬೂದಾನ ಕೇಸರಿ ಬಾತ್ ಸವಿಯಲು ಸಿದ್ಧ!
ನೀರು ಒಂದು ಅಳತೆಗೆ ಸಬ್ಬಕ್ಕಿಗೆ ಒಂದು ಅಳತೆ ನೀರು ಸಾಕು ಬೇಯಲು. ಹೆಚ್ಚು ನೀರು ಹಾಕಿದರೆ ತೆಳ್ಳಗೆ ಪಾಯಸದ ಹಾಗೆ ಆಗುತ್ತದೆ.


ಧನ್ಯವಾದಗಳು 🙏🙏🙏
