ಉಪಹಾರ ಸಾಂಬಾರು ಮತ್ತು ಪಲ್ಯಗಳು

BEETROOT NEERU DOSE & HIREKAYI CHUTNEY ಬೀಟ್ ರೂಟ್ ನೀರು ದೋಸೆ & ಹೀರೇಕಾಯಿ ಚಟ್ನಿ

BEETROOT NEERU DOSE & HIREKAYI CHUTNEY ಬೀಟ್ ರೂಟ್ ನೀರು ದೋಸೆ & ಹೀರೇಕಾಯಿ ಚಟ್ನಿ

ಬೀಟ್ ರೂಟ್ ನೀರು ದೋಸೆ ಮಾಡುವ ವಿಧಾನ:-

2 ಲೋಟ ದೋಸೆ ಅಕ್ಕಿಯನ್ನು ತೊಳೆದು ರಾತ್ರಿ ಪೂರ ನೆನೆಸಿಡಿ.

ಬೆಳಿಗ್ಗೆ 1/2 ಕಾಯಿ ತುರಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಕಾಯಿ ಸಾಧ್ಯವಾದರೆ ಎಳನೀರಿನ ಗಂಜಿ ಅಂತಾರಲ್ಲಾ ಆ ತರಹ ಎಳೆ ಕಾಯಿ ಆದರೆ ಒಳ್ಳೆಯದು! ಅದು ಸಿಗದಿದ್ದರೆ ಸಾಧಾರಣ ಕಾಯಿ ತುರಿ ಹಾಕಿ ರುಬ್ಬಿದರೂ ಆಯಿತು.

ಒಂದು ದೊಡ್ಡ ಬೀಟ್ ರೂಟ್ ತುರಿದು ಚೆನ್ನಾಗಿ ಹಿಂಡಿ ರಸ ಮಾತ್ರ ದೋಸೆ ಹಿಟ್ಟಿಗೆ ಸೇರಿಸಿ. ಉಳಿದ ತುರಿಯಿಂದ ಪಲ್ಯ ಮಾಡಬಹುದು. ಉಪ್ಪು ಮತ್ತು 2 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ. ಹೆಸರೇ ಹೇಳುವಂತೆ ನೀರು ದೋಸೆಯ ಹಿಟ್ಟು ನೀರಾಗಿರಬೇಕು!

ಕಾವಲೆ ಕಾಯಲು ಇಡಿ, ಸ್ವಲ್ಪ ಎಣ್ಣೆ ಸವರಿ ದೋಸೆ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಕಲೆಸಿ 1 ಸೌಟಿನಷ್ಟು ಹಿಟ್ಟು ತೆಗೆದು ಕೊಂಡು ಕಾವಲಿಯ ಮೇಲೆ ಗುಂಡಗೆ ಸುರಿಯಿರಿ. ಈ ದೋಸೆ ಸಾಧಾರಣ ದೋಸೆಯಂತೆ ಸೌಟಿನಿಂದ ಹರಡಲು ಆಗುವುದಿಲ್ಲ. ಸುರಿಯಬೇಕು ಅಷ್ಟೇ!

ಉರಿ ಕಡಿಮೆ ಮಾಡಿ ಒಂದು ತಟ್ಟೆ ಮುಚ್ಚಿ 1 ನಿಮಿಷ ಬೇಯಿಸಿ ಮಡಚಿ ತೆಗೆದಿಡಿ.

ನೀರು ದೋಸೆ ಸಾಮಾನ್ಯವಾಗಿ ಮೆತ್ತಗೆ ಇರುತ್ತದೆ. ಮತ್ತು ಒಂದು ಕಡೆ ಮಾತ್ರ ಬೇಯಿಸುವುದು!

ಆದರೆ ನನ್ನ ಮಕ್ಕಳಿಗೆ ಗರಿ ಗರಿಯಾದ ನೀರು ದೋಸೆ ಇಷ್ಟ!!! ಹಾಗಾಗಿ ನಾನು ತಿರುವಿ ಹಾಕಿ ಎರಡೂ ಕಡೆ ಬೇಯಿಸಿದ್ದೇನೆ.

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ನೀರು ದೋಸೆ ಜೊತೆಗೆ ಚಟ್ನಿ ಮತ್ತು ಕಾಯಿ ಬೆಲ್ಲ ಕೊಡುತ್ತಾರೆ. ಒಳ್ಳೆಯ Combination! ಕಾಯಿ ತುರಿ , ಬೆಲ್ಲದ ಪುಡಿ, ಚಿಟಿಕೆ ಏಲಕ್ಕಿ ಪುಡಿಹಾಕಿ ಕಲೆಸಿದರೆ ಕಾಯಿ ಬೆಲ್ಲ ರೆಡಿ!

ಒಂದು ಗಾದೆ ಇದೆ ” ಎಲ್ಲರ ಮನೆಯ ದೋಸೇನೂ ತೂತೇ” ಅಂತ! ಆದರೆ ನೀರು ದೋಸೆಗೆ ಮೈಯೆಲ್ಲಾ ತೂತೇ! ತೂತು ಹೆಚ್ಚು ಬಂದಷ್ಟೂ ದೋಸೆಯ ಹದ ಚೆನ್ನಾಗಿದೆ ಎಂದು ಅರ್ಥ!!!

ಈ ನೀರು ದೋಸೆಯನ್ನು ಕಾಯಿ ದೋಸೆ ಅಂತ ಕೂಡ ಕೆಲವರು ಕರೆಯುತ್ತಾರೆ! ಕಾಯಿ ತುರಿ Optional. ಹಾಕದೆ ಸಹ ಮಾಡಬಹುದು.

ಹೀಗೆ ಮಾಡುವುದರಿಂದ ಬೀಟ್ ರೂಟ್ ತಿನ್ನಲು ಇಷ್ಟ ಪಡದ ಮಕ್ಕಳು ಬೀಟ್ ರೂಟ್ ನ ಬಣ್ಣದ ದೋಸೆ ಇಷ್ಟ ಪಟ್ಟು ತಿನ್ನುತ್ತಾರೆ.

ಹೀರೆಕಾಯಿ ಚಟ್ನಿ :-

ಹೀರೇ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಯಾದ ಚಟ್ನಿ ಮಾಡುವ ರೆಸಿಪಿ ಇಲ್ಲಿದೆ!

2 ಹೀರೇ ಕಾಯಿ ತೊಳೆದು ಸಣ್ಣಗೆ ಹೆಚ್ಚಿಡಿ.

4 ಅಥವಾ 5 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

1 ಚಮಚ ಹುಣಿಸೆ ರಸ ತೆಗೆದಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಹೀರೇ ಕಾಯಿ, ಹಸಿ ಮೆಣಸಿನಕಾಯಿ, ಸ್ವಲ್ಪ ಕರಿ ಬೇವು, ಉಪ್ಪು ಹಾಕಿ ಹೀರೇ ಕಾಯಿ ಮೆತ್ತಗೆ ಆಗುವವರೆಗೆ ಬೇಯಿಸಿ.

ಇದು ಸ್ವಲ್ಪ ತಣ್ಣಗಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಹುಣಿಸೆ ರಸ ಹಾಕಿ ರುಬ್ಬಿ.

ಕೊನೆಯಲ್ಲಿ ಸಾಸಿವೆ, ಜೀರಿಗೆ, ಇಂಗು ಹಾಕಿ ಒಗ್ಗರಣೆ ಹಾಕಿ ಕಲೆಸಿದರೆ ರುಚಿಯಾದ, ಆರೋಗ್ಯಕರವಾದ ಹೀರೇ ಕಾಯಿ ಚಟ್ನಿ ಸಿದ್ಧ!

ಚಪಾತಿ, ಬಿಸಿ ಅನ್ನದ ಜೊತೆಗೆ 1 ಚಮಚ ತುಪ್ಪ ಹಾಕಿ ತಿಂದರೆ ತುಂಬಾ ಚೆನ್ನಾಗಿರುತ್ತದೆ. ಹೀರೇ ಕಾಯಿ ಇಷ್ಟ ಪಡದವರು ಕೂಡ ಇದು ಹೀರೇ ಕಾಯಿಯಿಂದ ಮಾಡಿದ್ದು ಎಂದು ಹೇಳದೆ ಕೊಟ್ಟರೆ ಬಾಯಿ ಚಪ್ಪರಿಸಿ ಕೊಂಡು ತಿನ್ನುತ್ತಾರೆ.

ಧನ್ಯವಾದಗಳು 🙏🙏🙏

Leave a Reply

Your email address will not be published.