AKKI PHENI SANDIGE ಅಕ್ಕಿ ಫೇಣಿ ಸಂಡಿಗೆ
ಬೇಸಿಗೆ ಕಾಲದಲ್ಲಿ ಹಪ್ಪಳ, ಸಂಡಿಗೆ ಮಾಡಿಟ್ಟರೆ ವರ್ಷ ಪೂರ ಬೇಕಾದಾಗ ಕರಿದು ತಿನ್ನಬಹುದು. ಇದು ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ವಿಧಾನ! ರುಚಿಯಾದ, ಸುಲಭವಾಗಿ ಮಾಡಬಹುದಾದ, ವರ್ಷ ಪೂರ ಕೆಡದೆ ಇರುವಂತಹ ಅಕ್ಕಿ ಫೇಣಿ ಸಂಡಿಗೆಯ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
ನಾಲ್ಕು ಅಳತೆ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಸೋರಿ ಹಾಕಿ ನೆರಳಿನಲ್ಲಿ ಚೆನ್ನಾಗಿ ಒಣಗಿಸಿಡಿ. ನೀರಿನಂಶ ಪೂರ್ತಿಯಾಗಿ ಹೋಗುವವರೆಗೆ ಒಣಗಬೇಕು.
ಒಂದು ಅಳತೆ ಸಬ್ಬಕ್ಕಿಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ಅಕ್ಕಿ ಜೊತೆಗೆ ಸೇರಿಸಿ ಚೆನ್ನಾಗಿ ಕಲೆಸಿ ಫ್ಲೋರ್ ಮಿಲ್ ನಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಡಿ.
ಸಂಡಿಗೆ ಮಾಡುವ ವಿಧಾನ :-
ನಿಮಗೆ ರುಚಿಗೆ ತಕ್ಕಷ್ಟು ಹಸಿರು ಮೆಣಸಿನಕಾಯಿ, ಇಂಗು, ಜೀರಿಗೆ, ಉಪ್ಪು ಸೇರಿಸಿ ನೀರು ಹಾಕದೆ ಚಟ್ನಿ ಹಾಗೆ ರುಬ್ಬಿಡಿ.

ಒಂದು ಬಾಣಲೆಯಲ್ಲಿ 1 ಅಳತೆ ನೀರು ಬಿಸಿಯಾಗಲು ಇಡಿ. ನೀರು ಕುದಿಯಲು ಪ್ರಾರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ ಒಂದು ಅಳತೆ ಹಿಟ್ಟು ಹಾಕಿ ಕಲೆಸಿ ಒಲೆಯಿಂದ ಕೆಳಗಿಳಿಸಿ ತಟ್ಟೆ ಮುಚ್ಚಿಡಿ.


ಚಕ್ಕುಲಿ ಒರಳಿಗೆ ನಿಮಗೆ ಇಷ್ಟವಾದ ಬಿಲ್ಲೆ ಹಾಕಿ ಪ್ಲಾಸ್ಟಿಕ್ ಷೀಟ್ ಮೇಲೆ ಸಂಡಿಗೆ ಹಿಂಡಿ, ಮೂರ್ನಾಲ್ಕು ದಿನ ಬಿಸಿಲಿನಲ್ಲಿ ಚೆನ್ನಾಗಿ ಎರಡೂ ಕಡೆ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವರ್ಷವಾದರೂ ಚೆನ್ನಾಗಿರುತ್ತದೆ. ನಿಮಗೆ ಬೇಕಾದಾಗ ಎಷ್ಟು ಬೇಕೋ ಅಷ್ಟು ಕರಿದು ಸವಿಯಬಹುದು.

ಧನ್ಯವಾದಗಳು 🙏🙏🙏
