Chutney

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು

ಚಟ್ನಿ ನಮ್ಮ ಭಾರತೀಯ ಆಹಾರದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ತಿಂಡಿ ಜೊತೆಗೆ ಒಂದು ಚಟ್ನಿ ಇರಲೇಬೇಕು. ಸಾಧಾರಣವಾಗಿ ಚಟ್ನಿ ತೆಂಗಿನ ಕಾಯಿ, ಹುರಿಗಡಲೆ ಹಾಕಿ ಮಾಡುವುದು. ಹುಳಿಯಾದ ಗೊಂಗೂರ ಸೊಪ್ಪಿನ ಚಟ್ನಿ ಮಾಡಬಹುದಾದ ರೆಸಿಪಿ ಇಲ್ಲಿದೆ.

ಎರಡು ಕಟ್ಟು ಗೊಂಗೂರ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದು ನೀರು ಸೋರಿ ಹಾಕಿಡಿ. ನೀರಿನಂಶ ಪೂರ್ತಿಯಾಗಿ ಹೋಗಲು ಬಟ್ಟೆಯ ಮೇಲೆ ಹರಡಿ.

1 ಟೇಬಲ್ ಚಮಚ ಧನಿಯಾ, 1/4 ಟೀ ಚಮಚ ಮೆಂತ್ಯ, ನಿಮ್ಮ ರುಚಿಗೆ ತಕ್ಕಷ್ಟು ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸೊಪ್ಪು ಹಾಕಿ ಕಡಿಮೆ ಉರಿಯಲ್ಲಿ ಸೊಪ್ಪು ಮೆತ್ತಗಾಗುವವರೆಗೆ ಹುರಿದು ತೆಗೆದಿಡಿ. ಎರಡು ಮೂರು ನಿಮಿಷ ಸಾಕಾಗಬಹುದು ಸೊಪ್ಪು ಮೆತ್ತಗಾಗಲು.

ನಂತರ Mixie jar ನಲ್ಲಿ ಹುರಿದ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪುಡಿ ಹಾಕಿ ಸುಮ್ಮನೆ ಒಂದು ಸುತ್ತು ಸುತ್ತಿ ತೆಗೆದಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು ಹಾಕಿ ನಂತರ ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಮಿಶ್ರಣದಿಂದ ಎಣ್ಣೆ ಹೊರ ಬರುವವರೆಗೆ ಬಿಸಿ ಮಾಡಿ ತಣ್ಣಗಾದ ಮೇಲೆ ಗಾಳಿಯಾಡದ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು.

ಯಾವುದೇ ಕಾರಣಕ್ಕೂ ನೀರಿನಂಶ ಇರಬಾರದು. ನಾನು ಬೆಳ್ಳುಳ್ಳಿ, ಬೆಲ್ಲ ಹಾಕಿಲ್ಲ. ನೀವು ಬೇಕಾದರೆ ಇಂಗು ಬದಲು ಸೊಪ್ಪಿನ ಜೊತೆಗೆ ಬೆಳ್ಳುಳ್ಳಿ ಹಾಕಿ ಹುರಿದು ರುಬ್ಬುವಾಗ ಸ್ವಲ್ಪ ಬೆಲ್ಲ ಸೇರಿಸಬಹುದು. ಸೊಪ್ಪು ಹುಳಿ ಹೆಚ್ಚಾಗಿರುವುದರಿಂದ ಖಾರಾ ಮತ್ತು ಉಪ್ಪು ತುಸು ಹೆಚ್ಚೇ ಬೇಕಾಗುತ್ತದೆ.

ಈ ಚಟ್ನಿ ಫ್ರಿಡ್ಜ್ ನಲ್ಲಿಟ್ಟರೆ ತಿಂಗಳಾದರೂ ಕೆಡುವುದಿಲ್ಲ. ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಆಹಾ! ಅದನ್ನು ತಿಂದು ನೋಡಿದರೇನೆ ಗೊತ್ತಾಗುವುದು. ಹಾಗಾದರೆ ನೀವೂ ಕೂಡ ಈ ರೆಸಿಪಿ ಟ್ರೈ ಮಾಡ್ತೀರಲ್ಲಾ?

ಧನ್ಯವಾದಗಳು 🙏🙏🙏

Leave a Reply

Your email address will not be published.