SIHI THENGOLALU ಸಿಹಿ ತೇಂಗೊಳಲು
ನಿಮ್ಮ ಅನ್ನಪೂರ್ಣೆ ಪೇಜ್ ನ 500 ನೇ ರೆಸಿಪಿ ಇದು. ಹಾಗಾಗಿ ಸಿಹಿ ರೆಸಿಪಿ ಆಗಲೇಬೇಕಲ್ಲವೇ? ಹಾಗೆ ಸ್ವಲ್ಪ ವಿಶೇಷವಾದ ರುಚಿಯ ರೆಸಿಪಿ ಆಗಬೇಕು ಅಲ್ಲವೇ? ತಮಿಳುನಾಡಿನ ಸಾಂಪ್ರಾದಾಯಕ ಸಿಹಿ ಇದು! ಇದನ್ನು ತಮಿಳಿನಲ್ಲಿ ತುಣಿ ತೇಂಗೊಳಲು ಅನ್ನುತ್ತಾರೆ. ತುಣಿ ಅಂದರೆ ತಮಿಳಿನಲ್ಲಿ ಬಟ್ಟೆ ಎಂದು ಅರ್ಥ. ಬಟ್ಟೆಯಲ್ಲಿ ಈ ತೇಂಗೊಳಲನ್ನು ಎಣ್ಣೆಯಲ್ಲಿ ನೇರವಾಗಿ ಹಿಂಡಿ ಮಾಡುವ ವಿಧಾನದಿಂದ ಈ ಹೆಸರು ಬಂದಿದೆ.
ತೇಂಗೊಳಲು ಎಲ್ಲರಿಗೂ ಇಷ್ಟವಾಗುವ ತಿಂಡಿ. ಸಾಮಾನ್ಯವಾಗಿ ಎಲ್ಲರೂ ತೇಂಗೊಳಲು ಉಪ್ಪು ಹಾಕಿ ಮಾಡುತ್ತಾರೆ. ಈ ತೇಂಗೊಳಲು ಸಕ್ಕರೆ ಹಾಕಿ ಮಾಡುವುದು ಈ ರೆಸಿಪಿಯ ವಿಶೇಷತೆ.
ಮಾಡುವ ವಿಧಾನ:-
ಅರ್ಧ ಲೋಟ ಸಕ್ಕರೆ, 2 ಏಲಕ್ಕಿ, 4 ಚಮಚ ತುರಿದ ಒಣ ಕೊಬ್ಬರಿ ತುರಿ ಸೇರಿಸಿ ನುಣ್ಣಗೆ ಪುಡಿ ಮಾಡಿಡಿ.
1 ಲೋಟ ದೋಸೆ ಅಕ್ಕಿ, 1/4 ಲೋಟ ಉದ್ದಿನ ಬೇಳೆ ತೊಳೆದು ಮೂರರಿಂದ ನಾಲ್ಕು ಗಂಟೆ ನೆನೆಸಿಡಿ. ನಂತರ ಕೈಯಿಂದ ತೆಗೆದು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿ. ಆದಷ್ಟೂ ನೀರು ಕಡಿಮೆ ಇರಬೇಕು. ಕೈಯಿಂದ ತೆಗೆದು ಹಾಕಿದಾಗ ಬರುವಷ್ಟು ನೀರಿನಲ್ಲೇ ರುಬ್ಬಬೇಕು. Grinder ನಲ್ಲಿ ರುಬ್ಬಿದರೆ ಚೆನ್ನಾಗಿರುತ್ತದೆ. ಇಲ್ಲದಿದ್ದರೆ Mixie ಯಲ್ಲಿ ಆದಷ್ಟೂ ಕಡಿಮೆ ನೀರಿನಲ್ಲಿ ನುಣ್ಣಗೆ ರುಬ್ಬಿ ಚಿಟಿಕೆ ಉಪ್ಪು ಒಂದು ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿಡಿ.

ಒಂದು ದಪ್ಪ ಪ್ಲಾಸ್ಟಿಕ್ ಕವರ್ ನಲ್ಲಿ ಈ ಮಿಶ್ರಣ ತುಂಬಿ ಕೊನೆಯಲ್ಲಿ ಒಂದು ಚಿಕ್ಕ ರಂಧ್ರ ಮಾಡಿ. ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ತೇಂಗೊಳಲು ನೇರವಾಗಿ ಹಿಂಡಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದು ತೆಗೆದು ಬಿಸಿ ಇರುವಾಗಲೇ ಸಕ್ಕರೆ ಪುಡಿ ಎರಡೂ ಕಡೆ ಉದುರಿಸಿ ತೆಗೆದರೆ ಸುಲಭವಾಗಿ ಮಾಡಬಹುದಾದ, ರುಚಿಯಾದ ಸಿಹಿ ತೇಂಗೊಳಲು ಸವಿಯಲು ಸಿದ್ಧ!


ನಾನು ಈ ರೆಸಿಪಿ ಕಲಿತದ್ದು ನಮ್ಮ ಊರಿನ ದೇವಸ್ಥಾನದ ಅಡುಗೆಯವರಾದ ಶ್ರೀ ಶ್ರೀನಿವಾಸ್ ಅವರಿಂದ. ಅವರು ಜಿಲೇಬಿ ಅಥವಾ ಜಾಂಗೀರ್ ಮಾಡುವ ಬಟ್ಟೆಯಲ್ಲಿ ಮಾಡುತ್ತಾರಂತೆ. ಆದರೆ ಮನೆಯಲ್ಲಿ ಆ ತರಹ ಬಟ್ಟೆ ಇರಲಿಲ್ಲವಾದ್ದರಿಂದ ನಾನು ಕವರ್ ನಲ್ಲಿ ಮಾಡಿದೆ. ನಿಮಗೆ ಹೀಗೆ ಮಾಡುವುದು ಕಷ್ಟ ಅನಿಸಿದರೆ ಚಕ್ಕುಲಿ ಒರಳಿಗೆ ತೇಂಗೊಳಲು ಬಿಲ್ಲೆ ಹಾಕಿ ಮನೆಯಲ್ಲಿರುವ ಜಾಲರಿ,ದೋಸೆ ಮಾಡುವ ಕುರ್ಪಿಯ ಮೇಲೆ ಹಿಂಡಿ ಎಣ್ಣೆಗೆ ಬಿಡಬಹುದು.

ಧನ್ಯವಾದಗಳು 🙏🙏🙏
