ಗಣೇಶನ ಹಬ್ಬದಲ್ಲಿ ಸಾಧಾರಣವಾಗಿ ಎಲ್ಲರೂ ಮಾಡುವ ಕಾಯಿ ಕಡುಬು, ಬೇಳೆ ಕಡುಬು, ಎಳ್ಳಿನ ಕಡಿಮೆ ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಆರೋಗ್ಯಕರವಾದದ್ದು, ರುಚಿಕರವಾದದ್ದು. ಸಕ್ಕರೆ ಅಥವಾ ಬೆಲ್ಲ ಹಾಕದೆ ಇರುವುದರಿಂದ ಮಧು ಮೇಹಿಗಳೂ ಸಹ ಸ್ವಲ್ಪ ರುಚಿ ನೋಡಬಹುದು.
ಸಾಮಾನ್ಯವಾಗಿ ಕಡುಬನ್ನು ಅಕ್ಕಿ ಹಿಟ್ಟು ಬೇಯಿಸಿ ಮಾಡುತ್ತಾರೆ. ಆದರೆ ಅಕ್ಕಿಯನ್ನು ನೆನೆಸಿ ಕಾಯಿ ತುರಿಯೊಂದಿಗೆ ರುಬ್ಬಿ, ಬೇಯಿಸಿ, ಹಲಸಿನ ಎಲೆಯಲ್ಲಿ ಕೋನ್ ಆಕಾರದಲ್ಲಿ ಮಾಡುವುದೇ ಈ ಕಡುಬಿನ ವಿಶೇಷತೆ!
ಕೋನ್ ಮಾಡಲು:-

ಹಲಸಿನ ಎಲೆಗಳನ್ನು ಚೆನ್ನಾಗಿ ತೊಳೆದು ತೊಟ್ಟುಗಳನ್ನು ತೆಗೆದು ಕೋನ್ ಆಕಾರದಲ್ಲಿ ಸುತ್ತಿ ಕಡ್ಡಿ ಚುಚ್ಚಿದರೆ ಕೋನ್ ಗಳು ಸಿದ್ಧ! (ಚಿತ್ರ ನೋಡಿ)
ಹೂರಣ ಮಾಡುವ ವಿಧಾನ :-
ಗೋಡಂಬಿ – 50 ಗ್ರಾಂ
ಬಾದಾಮಿ – 50 ಗ್ರಾಂ
ವಾಲ್ ನಟ್ – 50 ಗ್ರಾಂ
ಪಿಸ್ತಾ – 50 ಗ್ರಾಂ
ಒಣ ದ್ರಾಕ್ಷಿ – 50 ಗ್ರಾಂ
ಅಂಜೂರ – 50 ಗ್ರಾಂ
ಕರ್ಜೂರ – 50 ಗ್ರಾಂ ( ಬೀಜ ಇಲ್ಲದ್ದು )
ಹುರಿದ ಗಸಗಸೆ – 2 ಟೇಬಲ್ ಚಮಚ
ಒಣ ಕೊಬ್ಬರಿ ತುರಿ – 2 ಟೇಬಲ್ ಚಮಚ
ಏಲಕ್ಕಿ ಪುಡಿ – 4 ಸಿಪ್ಪೆ ತೆಗೆದು ಪುಡಿ ಮಾಡಿದ್ದು

ಮೇಲೆ ಹೇಳಿರುವ ಎಲ್ಲಾ ಒಣ ಹಣ್ಣುಗಳನ್ನು ಪುಡಿ ಮಾಡಿ. ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಒಣ ಹಣ್ಣಿನ ಪುಡಿ, ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿದರೆ ಹೂರಣ ರೆಡಿ.
ಕಣಕ ಮಾಡುವ ವಿಧಾನ:-

1 ಲೋಟ ಅಕ್ಕಿಯನ್ನು ತೊಳೆದು 2 ಗಂಟೆ ನೆನೆಸಿಡಿ. 1/2 ಹೋಳು ಕಾಯಿ ತುರಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ದೋಸೆ ಹಿಟ್ಟಿನ ಹದಕ್ಕೆ ಸ್ವಲ್ಪ ನೀರು ಸೇರಿಸಿ, ಚಿಟಿಕೆ ಉಪ್ಪು ಹಾಕಿ ದಪ್ಪ ತಳದ ಬಾಣಲೆಯಲ್ಲಿ ಬೇಯಲು ಇಡಿ. ಮಧ್ಯಮ ಉರಿಯಲ್ಲಿ ತಿರುಗಿಸುತ್ತಾ ಬೇಯಿಸಿ. ಕೈ ಬಿಟ್ಟರೆ ಗಂಟಾಗುತ್ತದೆ. ತಳದಿಂದ ತಿರುಗಿಸುತ್ತಾ ಬೇಯಿಸಿ ಸ್ವಲ್ಪ ಗಟ್ಟಿಯಾಗಿ ಆಗುವಷ್ಟರಲ್ಲಿ ಒಲೆಯಿಂದ ಇಳಿಸಿ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿದರೆ ಕಣಕ ರೆಡಿ! (ಒದ್ದೆ ಕೈಯಿಂದ ಮುಟ್ಟಿದರೆ ಅಂಟದೆ ಇರುವ ತನಕ ಬೇಯಿಸಿದರೆ ಸಾಕು. ಹಾಲು ಬಾಯಿ ಅಷ್ಟು ಗಟ್ಟಿಯಾಗಿ ಬೇಡ)
ಕಡುಬು ಮಾಡಲು:-

ನೀರಿನಲ್ಲಿ ನೆನೆಸಿದ ಹಲಸಿನ ಕೋನ್ ಗಳ ಒಳಗೆ ಕಣಕದ ಹಿಟ್ಟನ್ನು ಬೆರಳಿನಿಂದ ಸುತ್ತಲೂ ಸವರಿ, ಹೂರಣ ತುಂಬಿ ಸ್ವಲ್ಪ ಒತ್ತಿ ಮೇಲೆ ಮುಚ್ಚಳದಂತೆ ಇನ್ನು ಸ್ವಲ್ಪ ಹಿಟ್ಟು ಮೆತ್ತಿ ಕೋನ್ ಪೂರ್ಣವಾಗುವಂತೆ ಮಾಡಿ. ಎಲ್ಲಾ ಕೋನ್ ಗಳು ಮಾಡಿದ ನಂತರ ಕಡುಬುಗಳನ್ನು ಬಟ್ಟಲಿನಲ್ಲಿ ಹಾಕಿ 10 ರಿಂದ 12 ನಿಮಿಷ ಹಬೆಯಲ್ಲಿ ಬೇಯಿಸಿ.

ನಂತರ ಬೆಂದ ಕಡುಬುಗಳ ಮೇಲಿರುವ ಎಲೆ ತೆಗೆದು ಬಿಸಿ ಬಿಸಿಯಾಗಿ ತುಪ್ಪದೊಡನೆ ಸವಿಯಿರಿ!
ಈ ರೀತಿ ಮಾಡಿದ ಕಡುಬುಗಳು ಹಲಸಿನ ಸುವಾಸನೆಯಿಂದ ತುಂಬಾ ಚೆನ್ನಾಗಿರುತ್ತದೆ!

ಹಲಸಿನ ಎಲೆ ಸಿಗದಿದ್ದವರು ಬಾಳೆ ಎಲೆಯನ್ನು ತೊಳೆದು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಕಣಕದ ಹಿಟ್ಟನ್ನು ಕೈಯಿಂದ ಸವರಿ ಮಧ್ಯದಲ್ಲಿ ಹೂರಣದ ಉಂಡೆ ಇಟ್ಟು ಮಡಚಿ ಇದೇ ರೀತಿ ಹಬೆಯಲ್ಲಿ ಬೇಯಿಸಿ ಮಾಡಬಹುದು. ಕೋನ್ ತರಹ ಆಗುವುದಿಲ್ಲ ಸಾಧಾರಣ ಕಡುಬಿನ ಆಕಾರದಲ್ಲಿ ಮಾಡಬಹುದು.
ಧನ್ಯವಾದಗಳು![]()
![]()
![]()
