ಪ್ರತಿ ದಿನ ಬೇಳೆ ಸಾರು, ಟೋಮೇಟೋ ಸಾರು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಸುಲಭವಾಗಿ ಐದೇ ನಿಮಿಷದಲ್ಲಿ ಮಾಡಬಹುದು. ಅಥವಾ ಯಾವುದಾದರೂ ಸಮಾರಂಭಕ್ಕೆ ಹೋಗಿ ಬಂದಾಗ ಒಂದು ಹೊತ್ತಿಗೆ ಬೇಳೆ ಬೇಯಿಸಿ ಮಾಡಲು ಬೇಸರವಾಗಿದ್ದರೆ ಹೀಗೆ ಮಾಡಬಹುದು.
ಮಾಡುವ ವಿಧಾನ :-
ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ಕರಿಬೇವು ಸ್ವಲ್ಪ ತೊಳೆದಿಡಿ. ಒಂದು ಚಮಚ ಕರಿ ಮೆಣಸು, ಜೀರಿಗೆ ಹುರಿದು ಪುಡಿ ತರಿ ತರಿಯಾಗಿ ಮಾಡಿಡಿ.

ಬಾಣಲೆಯಲ್ಲಿ ಒಂದು ಚಮಚ ತುಪ್ಪ /ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಚಿಟಿಕೆ ಅರಿಷಿಣ ಹಾಕಿ ಬಾಡಿಸಿ ಹುಣಿಸೆ ರಸ, ಉಪ್ಪು, ಚೂರು ಬೆಲ್ಲ, ಮೆಣಸು ಜೀರಿಗೆ ಪುಡಿ, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

ನೀರು ಕುದಿಯುವಾಗ 2 ಚಮಚ ಸಾರಿನ ಪುಡಿ ಹಾಕಿ ಸ್ವಲ್ಪ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ಹುಣಿಸೆ ಸಾರು ಸವಿಯಲು ಸಿದ್ಧ!
ಈ ರೆಸಿಪಿಯಲ್ಲಿ ಇಂಗು ಒಗ್ಗರಣೆಗೆ ಹಾಕುವ ಬದಲು ಬೆಳ್ಳುಳ್ಳಿ ಹಾಕಬಹುದು.
ಧನ್ಯವಾದಗಳು ![]()
![]()
![]()
