Kannada ಉಪಹಾರ

KOTTHAMBARI CHITRANNA ಕೊತ್ತಂಬರಿ ಚಿತ್ರಾನ್ನ

ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು! ಕಬ್ಬಿಣದ ಅಂಶ ಹೇರಳವಾಗಿದೆ! ಆದರೆ ನಮ್ಮ ಮಕ್ಕಳು ಊಟ ಮಾಡುವಾಗ ಕೊತ್ತಂಬರಿ ಸೊಪ್ಪು ಸಿಕ್ಕರೆ ತೆಗೆದು ಪಕ್ಕಕ್ಕಿಡುತ್ತಾರೆ! ಅವರು ಹಾಗೆ ಮಾಡಬಾರದು ಅಂದರೆ ಹೀಗೆ ಮಾಡಿ! 😉😉😉 ಈಗ ಬೆಂಗಳೂರಲ್ಲಿ 1 ಕಟ್ಟು ನಾಟಿ ಕೊತ್ತಂಬರಿ ಸೊಪ್ಪು 10 ರೂಪಾಯಿ. ಹಾಗಾದರೆ ಈ ದಿನವೇ ಮಾಡಿ!

ಮಾಡುವ ವಿಧಾನ:-

1 ಪಾವು ಅಕ್ಕಿ ತೊಳೆದು ಅನ್ನ ಮಾಡಿಡಿ.

1 ಕಂತೆ ಕೊತ್ತಂಬರಿ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದಿಡಿ. ನಾಟಿ ಕೊತ್ತಂಬರಿ ಸೊಪ್ಪು ಆದರೆ ವಾಸನೆ ತುಂಬಾ ಚೆನ್ನಾಗಿರುತ್ತದೆ.

ತೊಳೆದ ಕೊತ್ತಂಬರಿ ಸೊಪ್ಪು, 4 ಹಸಿ ಮೆಣಸಿನಕಾಯಿ ನೀರು ಹಾಕದೆ ತರಿ ತರಿಯಾಗಿ ಎರಡು ಸುತ್ತು ಸುತ್ತಿದರೆ ಸಾಕು. ತುಂಬಾ ನುಣ್ಣಗೆ ರುಬ್ಬ ಬೇಡಿ.

4 ಚಮಚ ಕಾಯಿ ತುರಿದಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ/ ತುಪ್ಪ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ನಂತರ ಉಪ್ಪು, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಬಾಡಿಸಿ ನಂತರ ಮಾಡಿಟ್ಟ ಅನ್ನ, ಕಾಯಿ ತುರಿ, ನಿಂಬೆ ರಸ ಹಾಕಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ, ರುಚಿಯಾದ ಕೊತ್ತಂಬರಿ ಚಿತ್ರಾನ್ನ ಸಿದ್ಧ!

ಇದಕ್ಕೆ ಅರಿಷಿಣ ಬೇಡ, ಬೆಳ್ಳುಳ್ಳಿ ಇಷ್ಟವಾದವರು ಇಂಗು ಬದಲು ರುಬ್ಬಲು ಬೆಳ್ಳುಳ್ಳಿ ಸಿಪ್ಪೆ ತೆಗೆದು ಹಾಕಬಹುದು.

ಹೆಚ್ಚಿನ ರುಚಿಗೆ ಕಡಲೇ ಬೀಜ ಅಥವಾ ಗೋಡಂಬಿ ಕರಿದು ಹಾಕಿ.

ಧನ್ಯವಾದಗಳು.

Leave a Reply

Your email address will not be published.