Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MANOHARA UNDE ಮನೋಹರ ಉಂಡೆ( ಮನವಾರು ಉಂಡೆ)

ತಮಿಳುನಾಡಿನ ಸಾಂಪ್ರಾದಾಯಕ ಸಿಹಿ ತಿಂಡಿ! ಅಯ್ಯಂಗಾರ್ ಸಂಪ್ರದಾಯದಲ್ಲಿ ಮದುವೆ ಮನೆಗಳಲ್ಲಿ, ಮುಂಜಿಗಳಲ್ಲಿ ತಪ್ಪದೆ ಮಾಡುವ ಸಿಹಿ ಇದು!

ಮಾಡುವ ವಿಧಾನ:-

1 ಲೋಟ ಉದ್ದಿನ ಬೇಳೆ ತೊಳೆದು 2 ರಿಂದ 3 ಗಂಟೆ ನೆನೆಸಿಡಿ. ನಂತರ ನೀರು ಬಗ್ಗಿಸಿ ಉದ್ದಿನ ಬೇಳೆಯನ್ನು ಆದಷ್ಟೂ ನುಣ್ಣಗೆ ರುಬ್ಬಿ. ಹೆಚ್ಚು ನೀರು ಹಾಕಬೇಡಿ. ನೆಂದ ಉದ್ದಿನ ಬೇಳೆಯಲ್ಲಿರುವ ನೀರಿನಂಶವೇ ಸಾಕು! ತೀರ ಬೇಕೆನಿಸಿದರೆ ಒಂದೆರಡು ಚಮಚ ನೀರು ಹಾಕಿ.

    

ರುಬ್ಬಿದ ಮಿಶ್ರಣಕ್ಕೆ ಚಿಟಿಕೆ ಉಪ್ಪು, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ನಯವಾದ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ. ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಿಸಬೇಕು. ಉದ್ದಿನ ಬೇಳೆ ಮಿಶ್ರಣಕ್ಕೆ ಹಿಡಿಸುವಷ್ಟು ಅಕ್ಕಿ ಹಿಟ್ಟು ಹಾಕಿದರೆ ಸಾಕು. ಸುಮಾರು 3/4 ಲೋಟ ಅಥವಾ 1 ಲೋಟ ಅಕ್ಕಿ ಹಿಟ್ಟು ಬೇಕಾಗುತ್ತದೆ. ಸಾಧಾರಣವಾಗಿ ರೊಟ್ಟಿ ಮಾಡುವ ಅಕ್ಕಿ ಹಿಟ್ಟು ನಾನು ಹಾಕಿರುವುದು.

ಚೆನ್ನಾಗಿ ಕಲೆಸಿದ ಮಿಶ್ರಣವನ್ನು ಚಕ್ಕುಲಿ ಒರಳಿಗೆ ತೇಂಗೊಳಲು ಮಾಡುವ ಬಿಲ್ಲೆ ಹಾಕಿ, ಕಾದ ಎಣ್ಣೆಗೆ ಎಚ್ಚರಿಕೆಯಿಂದ ನೇರವಾಗಿ ಹಿಂಡಿ! ಉರಿ ಮಧ್ಯಮ ಮಾಡಿ. ಗರಿ ಗರಿಯಾಗಿ ಇರುವಂತೆ ಮಿಶ್ರಣ ಪೂರ್ತಿಯಾಗಿ ಮಾಡಿಡಿ.

        

ಬೆಂದ ತೇಂಗೊಳಲನ್ನು ಚಿಕ್ಕ ಚಿಕ್ಕದಾಗಿ ಪುಡಿ ಮಾಡಿಡಿ.

6 ಚಮಚ ಒಣ ಕೊಬ್ಬರಿ ತುರಿದಿಡಿ.

ಸ್ವಲ್ಪ ಗೋಡಂಬಿ ಸಣ್ಣಗೆ ಹೆಚ್ಚಿಡಿ.

4 ಏಲಕ್ಕಿ ಪುಡಿ ಮಾಡಿಡಿ.

2 1/2 ಲೋಟ ಬೆಲ್ಲ ತುರಿದು 1/4 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ಪಾಕ ಕುದಿದು ಉಂಡೆ ಪಾಕದ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ.

ದೊಡ್ಡ ಪಾತ್ರೆಯಲ್ಲಿ ತೇಂಗೊಳಲಿನ ಪುಡಿ, ಕೊಬ್ಬರಿ ತುರಿ, ಗೋಡಂಬಿ, ಏಲಕ್ಕಿ ಪುಡಿ, ಬೆಲ್ಲದ ಪಾಕ ಹಾಕಿ ಬೇಗ ಬೇಗ ಕಲೆಸಿ ಬಿಸಿಯಿದ್ದಾಗಲೇ ಗಟ್ಟಿಯಾಗಿ ಒತ್ತಿ ಉಂಡೆಗಳನ್ನು ಮಾಡಿ.

ಪಾಕ ಬಿಸಿಯಿದ್ದಾಗಲೇ ಉಂಡೆಗಳನ್ನು ಮಾಡಬೇಕು. ತಣ್ಣಗಾದ ನಂತರ ಉಂಡೆ ಕಟ್ಟಲು ಆಗುವುದಿಲ್ಲ. ಕೈಗೆ ಸ್ವಲ್ಪ ಅಕ್ಕಿ ಹಿಟ್ಟು ಸವರಿಕೊಂಡು ಉಂಡೆ ಕಟ್ಟುವುದು ಒಳ್ಳೆಯದು.

        

ಉಂಡೆ ಪಾಕದ ಹದ ಕಜ್ಜಾಯದ ವಿಡಿಯೋದಲ್ಲಿದೆ ಬೇಕಾದರೆ ನೋಡಿ. ಪಾಕ ಕುದಿದು ಎರಡೆಳೆ ಬಂದ ನಂತರ ಸ್ವಲ್ಪ ಪಾಕ ತೆಗೆದು ನೀರಿರುವ ಬಟ್ಟಲಿನಲ್ಲಿ ಹಾಕಿದರೆ ಅದು ನೀರಿನಲ್ಲಿ ಕರಗದೆ ಒಂದೇ ಉಂಡೆಯಂತೆ ಆದರೆ ಪಾಕ ಸರಿಯಾಗಿದೆ ಎಂದು ಅರ್ಥ! ನೀವು ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಉಂಡೆ ಪಾಕ ಬಂದೊಡನೆ ಒಲೆಯಿಂದ ಇಳಿಸಿ ಬೇಗ ಬೇಗ ಉಂಡೆ ಕಟ್ಟಬೇಕು.

ಹೀಗೆ ಮಾಡಿದ ಉಂಡೆಗಳು ವಾರವಾದರೂ ಗರಿ ಗರಿಯಾಗಿರುತ್ತದೆ! ಉಂಡೆಯ ಬಣ್ಣ ನೀವು ಹಾಕುವ ಬೆಲ್ಲದ ಬಣ್ಣಕ್ಕೆ ತಕ್ಕಂತೆ ಬರುತ್ತದೆ. ನಾನು ಹಾಕಿರುವುದು ಬೆಲ್ಲ ಸ್ವಲ್ಪ ಬೆಳ್ಳಗಿತ್ತು! ಹಾಗಾಗಿ ಬೆಳ್ಳಗಿನ ಉಂಡೆ!!! ತಣ್ಣಗಾದ ನಂತರ ಈ ಉಂಡೆ ಸ್ವಲ್ಪ ಗಟ್ಟಿಯಾಗಿ ಆಗುತ್ತದೆ.

ತಮಿಳಿನಲ್ಲಿ ಈ ಉಂಡೆಯನ್ನು ಮನವಾರು ಉಂಡೆ ಅನ್ನುತ್ತಾರೆ.

ಧನ್ಯವಾದಗಳು.

 

Leave a Reply

Your email address will not be published.