ಖಾರ ತಿನಿಸುಗಳು

HARA BARA CUTLET ಹರ ಬರಾ ಕಟ್ಲೆಟ್

HARA BARA CUTLET ಹರ ಬರಾ ಕಟ್ಲೆಟ್

ಸೊಪ್ಪು ಮತ್ತು ಹಸಿರು ಬಣ್ಣದ ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮಾಡುವುದರಿಂದ ಈ ಕಟ್ಲೆಟ್ ಗೆ ಈ ಹೆಸರು ಬಂದಿರಬಹುದು! ರುಚಿಯಾದ ಈ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ!

ಮಾಡುವ ವಿಧಾನ:-

ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಎರಡು ನಿಮಿಷ ಕುದಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಹಾಕಿ, ನೀರು ಸಂಪೂರ್ಣವಾಗಿ ಹೋದ ಮೇಲೆ ಗಟ್ಟಿಯಾಗಿ ಒಂದು ಸಲ ಹಿಂಡಿ ರುಬ್ಬಿಡಿ.

ಎರಡು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ.

ಒಂದು ಕ್ಯಾಪ್ಸಿಕಮ್, ಸ್ವಲ್ಪ ಎಳೆಯದಾದ ಹುರುಳಿ ಕಾಯಿ ಸಣ್ಣಗೆ ಹೆಚ್ಚಿಡಿ. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಬಟಾಣಿ ಬೇಯಿಸಿ ತರಿ ತರಿಯಾಗಿ ರುಬ್ಬಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್, ಹುರುಳಿ ಕಾಯಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಮೆತ್ತಗಾಗುವವರೆಗೆ ಬಾಡಿಸಿಡಿ.

ಒಂದು ದೊಡ್ಡ ಬಟ್ಟಲಿನಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ, ಒಂದು ಚಮಚ ಚಾಟ್ ಮಸಾಲ, ಒಂದು ಚಮಚ ಆಮ್ ಚೂರ್ ಪುಡಿ, ಒಂದು ಚಮಚ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಹಸಿರು ಮೆಣಸಿನಕಾಯಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು ಚಮಚ ಬ್ರೆಡ್ ಕ್ರಂಬ್ಸ್ ಹಾಕಿ ಚೆನ್ನಾಗಿ ಕಲೆಸಿಡಿ.

ಈ ಮಿಶ್ರಣದಿಂದ ಒಂದು ಚಿಕ್ಕ ಚಿಕ್ಕ ಉಂಡೆ ಮಾಡಿ ಕಟ್ಲೆಟ್ ಆಕಾರ ಕೊಟ್ಟು, ಬ್ರೆಡ್ ಕ್ರಂಬ್ಸ್ ಮೇಲೆ ಹೊರಳಿಸಿ ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಪೇಪರ್ ಮೇಲೆ ಹಾಕಿ , ನಿಮಗೆ ಇಷ್ಟವಾದ ಸಾಸ್ ಅಥವಾ ಚಟ್ನಿ ಜೊತೆಗೆ ಸವಿಯಿರಿ.

ಇದನ್ನು ಬೇಕಾದರೆ ಕಬ್ಬಿಣದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ Shallow fry ಬೇಕಾದರೂ ಮಾಡಬಹುದು. ನಾನು ಎರಡೂ ತರಹದ ಕಟ್ಲೆಟ್ ಮಾಡಿದ್ದೀನಿ.

ಧನ್ಯವಾದಗಳು 🙏🙏🙏

Leave a Reply

Your email address will not be published.