ಸಾಂಬಾರು ಮತ್ತು ಪಲ್ಯಗಳು

MASALA GADDE SAMBAR ಮಸಾಲ ಗಡ್ಡೆ ಸಾಂಬಾರ್

MASALA GADDE SAMBAR ಮಸಾಲ ಗಡ್ಡೆ ಸಾಂಬಾರ್

ಸಾಧಾರಣವಾಗಿ ಪ್ರತಿ ದಿನ ಬೇಳೆ ಸಾಂಬಾರ್ ಮಾಡಿ ಬೇಜಾರಾಗಿದ್ದರೆ ಒಂದು ಬದಲಾವಣೆಗಾಗಿ ಈ ಆಲೂಗೆಡ್ಡೆ ಸಾಂಬಾರ್ ಮಾಡಿ ನೋಡಿ. ಖಂಡಿತ ಇಷ್ಟ ಆಗುತ್ತದೆ. ಇದು ನಮ್ಮ ಅಮ್ಮ ಮಾಡುತ್ತಿದ್ದ ವಿಧಾನ! ಅವರು ಒರಳು ಕಲ್ಲಿನಲ್ಲಿ ರುಬ್ಬಿ ಮಾಡುತ್ತಿದ್ದರು.

ಮಾಡುವ ವಿಧಾನ :-

ನಾಲ್ಕು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ / ಪುಡಿ ಮಾಡಿಡಿ.

ಒಂದು ಈರುಳ್ಳಿ ಸಣ್ಣಗೆ ಹೆಚ್ಚಿ, ಒಂದು ಚಮಚ ಎಣ್ಣೆ ಹಾಕಿ ಹುರಿದಿಡಿ.

ಎರಡು ಟೇಬಲ್ ಚಮಚ ಕಾಯಿ ತುರಿದಿಡಿ.

ಎಂಟರಿಂದ ಹತ್ತು ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.

ಒಂದು ಟೇಬಲ್ ಚಮಚ ಧನಿಯಾ, ಒಂದು ಟೇಬಲ್ ಚಮಚ ಗಸಗಸೆ ಹುರಿದು ಸ್ವಲ್ಪ ಬೆಚ್ಚಗೆ ಇರುವಾಗಲೇ ನುಣ್ಣಗೆ ಪುಡಿ ಮಾಡಿ. ಜೊತೆಗೆ ಕಾಯಿ ತುರಿ, ಮೆಣಸಿನ ಕಾಯಿ ಪುಡಿ, ಹುರಿದ ಈರುಳ್ಳಿ ಜೊತೆಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಡಿ.

ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಚಿಟಿಕೆ ಅರಿಷಿಣ ಹಾಕಿ ಒಗ್ಗರಣೆ ಮಾಡಿ ರುಬ್ಬಿದ ಮಿಶ್ರಣ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಬೆಂದ ಆಲೂಗೆಡ್ಡೆ, ಸ್ವಲ್ಪ ನೀರು ಹಾಕಿ ಕುದಿಸಿ, ಕೊನೆಯಲ್ಲಿ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ ಬಾಯಲ್ಲಿ ನೀರೂರಿಸುವ ಮಸಾಲ ಗೆಡ್ಡೆ ಸಾಂಬಾರ್ ಸವಿಯಲು ಸಿದ್ಧ!

ಇದಕ್ಕೆ ಸಾಧಾರಣವಾಗಿ ಹುಣಿಸೆ ಹಣ್ಣು ಹಾಕುವುದಿಲ್ಲ. ಬೇಕಾದರೆ ನಿಂಬೆ ಹಣ್ಣಿನ ರಸ ಹಾಕಿಕೊಳ್ಳಬಹುದು.

ಇದು ಬಿಸಿ ಅನ್ನ, ಚಪಾತಿ, ದೋಸೆ ಜೊತೆಗೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.