GREEN ALU FRY ಗ್ರೀನ್ ಆಲೂ ಫ್ರೈ
Pot – To – Plate
ಆಲೂಗಡ್ಡೆ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸರುಚಿಯ ಪಲ್ಯ ಇಲ್ಲಿದೆ. ಸುಲಭ ಮತ್ತು ರುಚಿಕರ!
ಮಾಡುವ ವಿಧಾನ:-
ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಉದ್ದಕೆ ಹೆಚ್ಚಿಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಜೀರಿಗೆ, ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಆಲೂಗಡ್ಡೆ ಬೇಯುವವರೆಗೆ ತಟ್ಟೆ ಮುಚ್ಚಿ ಬೇಯಲು ಇಡಿ.

ಇನ್ನೊಂದು ಕಡೆ, ಒಂದು ಕಟ್ಟು ಪುದೀನಾ, ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, ಮೂರು ಹಸಿ ಮೆಣಸಿನಕಾಯಿ, ನಾಲ್ಕು ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಶುಂಠಿ ಇಷ್ಟು ಕೆಲವೇ ಚಮಚ ನೀರು ಹಾಕಿ ಚಟ್ನಿಯ ಹಾಗೆ ರುಬ್ಬಿ. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಕಡಿಮೆ ಉರಿಯಲ್ಲಿ ಹುರಿದು ಬೆಂದ ಆಲೂಗಡ್ಡೆಗೆ ಸೇರಿಸಿ, ಅರ್ಧ ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಗ್ರೀನ್ ಆಲೂ ಫ್ರೈ ಸವಿಯಲು ಸಿದ್ಧ!


ಇದು ಚಪಾತಿ ಜೊತೆಗೆ ಅಥವಾ ಬಿಸಿ ಅನ್ನ ಸಾರಿನ ಜೊತೆಗೆ ಸೈಡ್ ಡಿಶ್ ಆಗಿ ತಿನ್ನಬಹುದು.
ನಾನು ಹಾಕಿರೋದು ನಮ್ಮ ಮನೆಯ ಪಾಟಿನಲ್ಲಿ ಬೆಳೆದ ತಾಜಾ ಪುದೀನಾ. ಅಂಗಡಿಯಲ್ಲಿ ತಂದ ಪುದೀನಾ ಕಡ್ಡಿ ಪಾಟಿನಲ್ಲಿ ನೆಟ್ಟರೆ ಬೇಕಾದಾಗ ಉಪಯೋಗಿಸಬಹುದು. ಎಲೆ ಮಾತ್ರ ಕತ್ತರಿಸಿ ಬೇರು ಹಾಗೇ ಬಿಟ್ಟರೆ ಮತ್ತೆ ಚಿಗುರುತ್ತದೆ.

ಧನ್ಯವಾದಗಳು 🙏🙏🙏
