JAJJU MOOLANGI ಜಜ್ಜು ಮೂಲಂಗಿ
ಮೂಲಂಗಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರಿಗೆ ಅದರ ವಾಸನೆ ಹಿಡಿಸುವುದಿಲ್ಲ. ಹಾಗೆಂದು ಅದನ್ನು ತಿನ್ನದೆ ಇರಲು ಆಗುವುದೇ? ಹಸಿ ಮೂಲಂಗಿಯ ರುಚಿಯಾದ ರೆಸಿಪಿ ಇಲ್ಲಿದೆ! ಇದು ನನ್ನ ತಾಯಿ ಮಾಡುತ್ತಿದ್ದ ವಿಧಾನ! ಒರಳು ಕಲ್ಲಿನಲಿ ರುಬ್ಬಿ ಮಾಡಿದರೆ ರುಚಿ ಹೆಚ್ಚು.
ಮಾಡುವ ವಿಧಾನ :-
4 ಎಳೆಯ ಮೂಲಂಗಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ.

ಅರ್ಧ ಹೋಳು ತೆಂಗಿನ ಕಾಯಿ ತುರಿದಿಡಿ.
ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ನಾಲ್ಕು ಹಸಿರು ಮೆಣಸಿನಕಾಯಿ ತೊಟ್ಟು ತೆಗೆದಿಡಿ. ನಾನು ಹಸಿರು ಮೆಣಸಿನಕಾಯಿ ಪೇಸ್ಟ್ ಹಾಕಿದ್ದೇನೆ.
ಎರಡು ಚಮಚ ಹುಣಸೆ ಹಣ್ಣಿನ ರಸ ತೆಗೆದಿಡಿ.
ಮೂಲಂಗಿ ಬಿಟ್ಟು ಉಳಿದ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಮೂಲಂಗಿ ಹೋಳುಗಳನ್ನು ಸೇರಿಸಿ ಸ್ವಲ್ಪ ರುಬ್ಬಿ ತೆಗೆದಿಡಿ. ಮೂಲಂಗಿ ನುಣ್ಣಗೆ ಆಗುವುದು ಬೇಡ. ಸ್ವಲ್ಪ ಜಜ್ಜಿದಂತಾದರೆ ಸಾಕು.

ಕೊನೆಯಲ್ಲಿ ಸಾಸಿವೆ ಇಂಗಿನ ಒಗ್ಗರಣೆ ಹಾಕಿ ಕಲೆಸಿದರೆ ರುಚಿಯಾದ ಆರೋಗ್ಯಕರವಾದ ಜಜ್ಜು ಮೂಲಂಗಿ ಸವಿಯಲು ಸಿದ್ಧ!
ನಾನು ಒರಳು ಕಲ್ಲಿನಲ್ಲಿ ಜಜ್ಜಿ ಮಾಡಿರುವುದು. ನೀವು ಬೇಕಾದರೆ Mixie ಯಲ್ಲಿ ಮೊದಲು ಚಟ್ನಿ ಮಾಡಿಕೊಂಡು ಮೂಲಂಗಿ ಹಾಕಿ ಒಂದು ಸುತ್ತು ಸುತ್ತಿಸಿದರೆ ಸಾಕು. ಅಥವಾ ಮೂಲಂಗಿ ತುರಿದು ಬೇಕಾದರೆ ಸೇರಿಸಬಹುದು.

ಧನ್ಯವಾದಗಳು 🙏🙏🙏
