FRUITS PAYASA ಫ್ರೂಟ್ಸ್ ಪಾಯಸ
ನಮ್ಮ ಭಾರತೀಯ ಆಹಾರದಲ್ಲಿ ಪಾಯಸ/ ಖೀರ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಹಬ್ಬ, ವಿಶೇಷ ಸಂದರ್ಭ, ಜಾತ್ರೆ, ಸಂತೋಷದ ಸಮಾರಂಭದಲ್ಲಿ ಒಂದಲ್ಲ ಒಂದು ವಿಧಧ ಪಾಯಸ ಇರಲೇ ಬೇಕು. ಸಾಧಾರಣವಾಗಿ ಮಾಡುವ ವಿಧಾನಕ್ಕಿಂತ ಸ್ವಲ್ಪ ವಿಶೇಷವಾದ ರುಚಿ ಬೇಕಾದರೆ ಈ ಹಣ್ಣುಗಳ ಪಾಯಸ ಮಾಡಿ ನೋಡಿ! ಖಂಡಿತಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.
ಮಾಡುವ ವಿಧಾನ :-
ಎರಡು ಹಿಡಿ ಬಾದಾಮಿ, 1 ಚಮಚ ಬಾಸುಮತಿ ಅಕ್ಕಿ ತೊಳೆದು ಎರಡು ಗಂಟೆ ನೆನೆಸಿ ಬಾದಾಮಿಯ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.

ನಿಮ್ಮ ಇಷ್ಟದ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಡಿ.

ಸ್ವಲ್ಪ ಡ್ರೈ ಫ್ರೂಟ್ಸ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.
ದಪ್ಪ ತಳದ ಪಾತ್ರೆ ಅಥವಾ ಕುಕ್ಕರಿನಲ್ಲಿ ಅರ್ಧ ಲೀಟರ್ ಗಟ್ಟಿಯಾದ ಹಾಲು ಹಾಕಿ ಕುದಿಯಲು ಇಡಿ. ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಗಂಟಿಲ್ಲದ ಹಾಗೆ ಕಲೆಸಿ ಕಡಿಮೆ ಉರಿಯಲ್ಲಿ ಪಾಯಸ ಗಟ್ಟಿಯಾಗುವವರೆಗೆ ಕುದಿಸಿ. 4 ಚಮಚ ಸಕ್ಕರೆ/ ಬೆಲ್ಲ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.
ಈ ಪಾಯಸ ಸಂಪೂರ್ಣವಾಗಿ ತಣ್ಣಗಾದ ನಂತರ ಹೆಚ್ಚಿದ ಹಣ್ಣುಗಳು, ಡ್ರೈ ಫ್ರೂಟ್ಸ್, ಎರಡು ಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಕಲೆಸಿ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ನಂತರ ಸವಿಯಿರಿ.

ಡ್ರೈ ಫ್ರೂಟ್ಸ್ ತುಪ್ಪದಲ್ಲಿ ಹುರಿದು ಅಥವಾ ಹಸಿಯಾಗಿ ಸೇರಿಸಬಹುದು.

ಹಣ್ಣು ತಿನ್ನಲು ಹಠ ಮಾಡುವ ಮಕ್ಕಳಿಗೆ ಹೀಗೆ ಮಾಡಿ ಕೊಡಿ. ಖಂಡಿತಾ ಇಷ್ಟ ಪಟ್ಟು ಬಟ್ಟಲು ಖಾಲಿ ಮಾಡ್ತಾರೆ.
ಧನ್ಯವಾದಗಳು 🙏🙏🙏
