ಮಕ್ಕಳಿಗೆ ತುಂಬಾ ಇಷ್ಟವಾಗುವ ರೀತಿಯಲ್ಲಿ ಮಾಡಬಹುದಾದ ರೆಸಿಪಿ! ರುಚಿಕರ, ಆರೋಗ್ಯಕರವಾದದ್ದು! ಮಾಡುವುದು ಸುಲಭ ಕೂಡ!
ಮಾಡುವ ವಿಧಾನ :-
ಚಪಾತಿ ಮಾಡಲು:-
1/2 ಬಟ್ಟಲು ಮೈದಾ, 1/2 ಬಟ್ಟಲು ಗೋಧಿ ಹಿಟ್ಟು, 1 ಚಮಚ ಎಣ್ಣೆ, ಉಪ್ಪು, 1 ಬೇಯಿಸಿ ಸಿಪ್ಪೆ ತೆಗೆದು ತುರಿದ ಆಲೂಗೆಡ್ಡೆ ಸೇರಿಸಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಅಥವಾ ಹಾಲು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ 10 ನಿಮಿಷ ಮುಚ್ಚಿಡಿ.

ಮಸಾಲೆಗೆ:-
2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.
100 ಗ್ರಾಂ ಪನ್ನೀರ್ ತುರಿದಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಪಾಲಾಕ್ ಸೊಪ್ಪು ಹಾಕಿ ಬಾಡಿಸಿ, 1 ಚಿಕ್ಕ ಚಮಚ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಪನ್ನೀರ್ ತುರಿ ಸೇರಿಸಿ ಒಲೆಯಿಂದ ಇಳಿಸಿ.

ಕಲೆಸಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಚಪಾತಿ ಲಟ್ಟಿಸಿ ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ, ಚಪಾತಿಯ ಒಂದು ಬದಿಗೆ Mayonnaise sauce ಸವರಿ ಮಧ್ಯದಲ್ಲಿ ಪನ್ನೀರ್ ಮಿಶ್ರಣ ಹರಡಿ ಸ್ವಲ್ಪ ಮೆಣಸಿನಕಾಯಿಯ ಪುಡಿಯನ್ನು ಉದುರಿಸಿ ಸುತ್ತಿ. ಇನ್ನೊಂದು ಸಲ ಚಪಾತಿಯನ್ನು ಎರಡೂ ಕಡೆ ಬೇಯಿಸಿ, ಚಪಾತಿಯ ಕೊನೆಯಲ್ಲಿ ಸ್ವಲ್ಪ ಮಡಚಿ Tissue paper ಸುತ್ತಿ ಕಾವಲಿಯಿಂದ ತೆಗೆಯಿರಿ. ಹೀಗೆ ಮಾಡುವುದರಿಂದ ಒಳಗೆ ತುಂಬಿರುವ ಪನ್ನೀರ್ ಮಿಶ್ರಣ ಹೊರ ಬರುವುದಿಲ್ಲ!

ನಂತರ ನಿಮಗೆ ಬೇಕಾದ ಯಾವುದೇ ಚಟ್ನಿ, ಸಾಸ್ ನೊಂದಿಗೆ ಸವಿಯಿರಿ!

ಮೆಯೊನ್ನೀಸ್ ಸಾಸ್ ಬೇಕಾದರೆ ಹಾಕಬಹುದು! ಅಥವಾ ಒಂದು ಚಮಚ ಮೈದಾ ಅಥವಾ ಕಾರ್ನ್ ಫ್ಲೋರ್ ಗೆ ಸ್ವಲ್ಪ ನೀರು ಸೇರಿಸಿ, ಸ್ವಲ್ಪ ಉಪ್ಪು, ಆಮ್ ಚೂರ್ ಪುಡಿ ಹಾಕಿ ಗಂಟಿಲ್ಲದ ಹಾಗೆ ಕಲೆಸಿ ಸ್ವಲ್ಪ ಕುದಿಸಿ ಆರಿಸಿದ ಬಳಿಕ ಆ ಪೇಸ್ಟ್ ಅನ್ನು ಸವರಿ ಪನ್ನೀರ್ ಮಿಶ್ರಣ ಹರಡಿ ಮಾಡಬಹುದು!
ಧನ್ಯವಾದಗಳು![]()
![]()
![]()