Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BATHASU ಬತಾಸು

ನಾವು ಚಿಕ್ಕವರಿದ್ದಾಗ ಊರ ಜಾತ್ರೆಗಳಲ್ಲಿ, ರಥೋತ್ಸವಗಳಲ್ಲಿ ಬೀದಿ ಬದಿಯ ಅಂಗಡಿಗಳಲ್ಲಿ ರಾಶಿ ರಾಶಿಯಾಗಿ ಹಾಕಿ ಮಾರುತ್ತಿದ್ದ ತಿಂಡಿಗಳಲ್ಲಿ ಈ ಬತಾಸು ಕೂಡ ಒಂದು! ಅಪ್ಪ, ಅಮ್ಮನ ಕೈಹಿಡಿದು ಬೊಗಸೆ ತುಂಬಾ ಬತಾಸು ತಿಂದು ಖುಷಿ ಪಡುತ್ತಿದ್ದ ಕಾಲ ಎಷ್ಟು ಚೆನ್ನ!

ನನ್ನ ಮಗಳ ಆಸೆಯ ಮೇರೆಗೆ ನಮ್ಮ ಪಕ್ಕದ ಮನೆಯ ನಮ್ಮ ಕುಟುಂಬದ ಆಪ್ತರಾದ ಶ್ರೀಮತಿ ಆಂಡಾಳು ಅವರಿಂದ ಕಲಿತು ನಾನು ಮೊದಲ ಬಾರಿ ಬತಾಸು ಮಾಡಿದ್ದೇನೆ! ತುಂಬಾ ಚೆನ್ನಾಗಿ ಬಂದಿದೆ!

ಮಾಡುವ ವಿಧಾನ:-

2 ಚಮಚ ಸಕ್ಕರೆಯನ್ನು ನುಣ್ಣಗೆ ಪುಡಿ ಮಾಡಿಡಿ.

ಒಂದು ಬಟರ್ ಪೇಪರ್ ಮೇಲೆ ಸಕ್ಕರೆ ಪುಡಿಯನ್ನು ಉದುರಿಸಿ.

  

ನಿಮ್ಮ ಮನೆಯಲ್ಲಿರುವ ಯಾವುದಾದರೂ ಚಿಕ್ಕ ಚಿಕ್ಕ ಚಾಕೊಲೇಟ್, ಕೇಕ್ ಮಾಡುವ Mould ಗಳಿದ್ದರೆ ಅದರಲ್ಲಿ ಬೇಕಾದರೂ ಮಾಡ ಬಹುದು. ನಾನು ಕಟ್ಲೆಟ್ ಕಟ್ಟರ್ ಗಳನ್ನು ಬಳಸಿದ್ದೇನೆ.

ಈ ರೀತಿ ನೀವು ಮೊದಲೇ ಸಿದ್ಧತೆ ಮಾಡಿಕೊಂಡು ನಂತರ ಪಾಕ ಮಾಡಲು ಇಡಿ.

1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ದಪ್ಪ ತಳದ ಬಾಣಲೆಯಲ್ಲಿ ಕುದಿಯಲು ಇಡಿ.

    

ಸಕ್ಕರೆ ಕರಗಿ ಕುದಿಯಲು ಶುರುವಾದ ನಂತರ ಆಗಾಗ ತಿರುಗಿಸುತ್ತಾ ಮಿಶ್ರಣ ಗಟ್ಟಿಯಾಗಲು ಬಿಡಿ. ಉರಿ ಸ್ವಲ್ಪ ಕಡಿಮೆ ಮಾಡಿ.

ಪಾಕ ಎರಡೆಳೆ ಬಂದ ತಕ್ಷಣ 1/4 ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.

ಗಟ್ಟಿಯಾದ ಮಿಶ್ರಣವನ್ನು ಬೇಗ ಬೇಗ ಬಟರ್ ಪೇಪರ್ ಮೇಲೆ ಪುಟ್ಟ ಪುಟ್ಟ ಸಂಡಿಗೆಗಳ ಹಾಗೆ ಚಮಚದಿಂದ ಮಧ್ಯೆ ಸ್ವಲ್ಪ ಅಂತರ ಕೊಟ್ಟು ಹಾಕಿ.

ಅಥವಾ ಚಾಕೊಲೇಟ್ mould ಗಳ ಮೇಲೆ ಹಾಕಿ. ಈ ಸಮಯದಲ್ಲಿ ಸ್ವಲ್ಪ ಬೇಗ ಬೇಗ ಹಾಕಬೇಕು. ಇಲ್ಲದಿದ್ದರೆ ಸಕ್ಕರೆ ಪಾಕ ತುಂಬಾ ಗಟ್ಟಿಯಾಗುತ್ತೆ.

ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ತೆಗೆದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕಾದಾಗ ತಿನ್ನಬಹುದು!

  

ಅಕಸ್ಮಾತ್ ನೀವು mould ಗೆ ಹಾಕುವ ಮೊದಲೇ ಪಾಕ ತುಂಬಾ ಗಟ್ಟಿಯಾದರೆ ಹೆದಲುವ ಅವಶ್ಯಕತೆಯಿಲ್ಲ. ಕೆಲವು ಚಮಚ ನೀರು ಹಾಕಿ ಕುದಿಸಿ ಎರಡೆಳೆ ಪಾಕ ಬಂದೊಡನೆ ಒಲೆಯಿಂದ ತೆಗೆದು ಮತ್ತೆ ಮಾಡಬಹುದು!

ಹೀಗೆ ಮಾಡಿದ ಬತಾಸು ಬಾಯಲ್ಲಿಟ್ಟರೆ ಕರಗುವಷ್ಟು ಚೆನ್ನಾಗಿರುತ್ತದೆ!

ಧನ್ಯವಾದಗಳು

Leave a Reply

Your email address will not be published.