Kannada Oota

STUFFED KULCHA & BENDI MASALA ಸ್ಟಫ್ಡ್ ಕುಲ್ಚಾ ಮತ್ತು ಬೆಂಡಿ ಮಸಾಲ

ಮಾಡುವ ವಿಧಾನ:-

    

ಮೊದಲು ಕುಲ್ಚಾ ಹಿಟ್ಟನ್ನು ಸಿದ್ಧ ಮಾಡಿಕೊಳ್ಳಿ. 1 ಬಟ್ಟಲು ಮೈದಾ ಹಿಟ್ಟಿಗೆ ತಲಾ 1/2 ಚಮಚ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಸಕ್ಕರೆ, 1 ಚಮಚ ಉಪ್ಪು, 1 ಚಮಚ ಎಣ್ಣೆ, 2 ಚಮಚ ಬಿಳಿ ಎಳ್ಳು, ಹೆಚ್ಚಿದ ಕೊತ್ತಂಬರಿ, 2 ಚಮಚ ಮೊಸರು ಹಾಕಿ, ಚೆನ್ನಾಗಿ ಕಲೆಸಿ, ಬೇಕಾದಲ್ಲಿ ಸ್ವಲ್ಪ ನೀರು ಹಾಕಿ, ಮೆತ್ತಗೆ ಕಲೆಸಿ, ಒದ್ದೆ ಬಟ್ಟೆ ಹಾಕಿ 2 ತಾಸು ನೆನೆಯಲು ಬಿಡಿ. 2 ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು, ಪುಡಿ ಮಾಡಿ, ತಲಾ 1/2 ಚಮಚ ಗರಂ ಮಸಾಲ, ಚಾಟ್ ಮಸಾಲಾ, ಆಮ್ ಚೂರ್ ಪುಡಿ, ಖಾರದ ಪುಡಿ, ಜೀರಾ ಪುಡಿ, ಹೆಚ್ಚಿದ ಮೆಣಸಿನ ಕಾಯಿ, ಕೊತ್ತಂಬರಿ, ಉಪ್ಪು ಸೇರಿಸಿ, ಕಲೆಸಿ ಉಂಡೆ ಮಾಡಿ ಕೊಳ್ಳಿ. ಈ ಮಿಶ್ರಣವನ್ನು ಕುಲ್ಚ ಮಾಡುವ ಮುಂಚೆ ಮಾಡಿಕೊಳ್ಳಿ, ಮೊದಲೇ ಮಾಡಿಟ್ಟರೆ ನೀರು ಬಿಟ್ಟು ಕೊಳ್ಳುತ್ತದೆ. ಕುಲ್ಚ ಹಿಟ್ಟನ್ನು ಸ್ವಲ್ಪ ದಪ್ಪಗೆ ಲಟ್ಟಿಸಿ, ಆಲೂ ಉಂಡೆಯನ್ನು ಇಟ್ಟು ಮಡಚಿ, ಮೇಲೆ ಎಳ್ಳು ಕೊತ್ತಂಬರಿ ಸ್ವಲ್ಪ ಉದುರಿಸಿ, ಲಟ್ಟಿಸಿ ಮೇಲೆ ಭಾಗಕ್ಕೆ ಸ್ವಲ್ಪ ನೀರು ಸವರಿ, ಆ ಭಾಗವನ್ನು ತವಾ ಮೇಲೆ ಹಾಕಿ, 1 ನಿಮಿಷದ ನಂತರ ತವಾ ತಲೆ ಕೆಳಗು ಮಾಡಿ, ಕುಲ್ಚಾ ಎಲ್ಲಾ ಕಡೆ ಬೇಯಿಸಿ, ತೆಗೆದು ಬೆಣ್ಣೆ ಸವರಿ ಬಡಿಸಿ. (Non stick ತವಾ ದಯವಿಟ್ಟು ಉಪಯೋಗಿಸ ಬೇಡಿ, ಕಬ್ಬಿಣದ ತವಾ ಅಥವಾ ಆಮ್ಲೆಟ್ ತವಾ ಉಪಯೋಗಿಸಿ, ಇದು ಕಷ್ಟವಾದರೆ ಪರೋಟದಂತೆ ತವಾ ಮೇಲೆ ಹಾಗೆಯೇ ಮಾಡಬಹುದು‌, ಪುಲ್ಕಾದಂತೆ ಬೇಕಾದರೂ ಮಾಡಬಹುದು)

 

ಬೆಂಡಿ ಮಸಾಲೆ ಮಾಡುವ ವಿಧಾನ:-

ಬೆಂಡಿಯನ್ನು 2 ಇಂಚು ಉದ್ದದ ತುಂಡುಗಳನ್ನಾಗಿ ಮಾಡಿ, ಎಣ್ಣೆಯಲ್ಲಿ ಕೆಂಪಾಗುವಂತೆ ಕರಿದು ಇಡಿ. 1 ಈರುಳ್ಳಿ, 2 ಟೋಮೇಟೋ, 12 ರಿಂದ 15 ಗೋಡಂಬಿಯನ್ನು ಎಣ್ಣೆಯಲ್ಲಿ ಹುರಿದು, ರುಬ್ಬಿ ಇಡಿ‌. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಈರುಳ್ಳಿ, ಜೀರಿಗೆ ಹಾಕಿ, ರುಬ್ಬಿದ ಮಿಶ್ರಣ ಹಾಕಿ, 3 ರಿಂದ 4 ನಿಮಿಷ ಬಾಡಿಸಿ, ಗರಂ ಮಸಾಲ, ಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಹುರಿದ ಬೆಂಡಿ, ಸ್ವಲ್ಪ ನೀರು ಹಾಕಿ, 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿ, ಫ್ರೆಶ್ ಕ್ರೀಮ್ 2 ಚಮಚ ಹಾಕಿ ಕಲೆಸಿ, ಕುಲ್ಚದೊಂದಿಗೆ ಬಿಸಿಯಾಗಿ ಬಡಿಸಿ.

ಬಾಯಲ್ಲಿ ನೀರೂರಿಸುವ ಕುಲ್ಚಾ ಮತ್ತು ಬೆಂಡಿ ಮಸಾಲದ ರುಚಿ ಸವಿದು ನೋಡಿ.

ಧನ್ಯವಾದಗಳು.

Leave a Reply

Your email address will not be published.