Kannada ಸಾಂಬಾರು ಮತ್ತು ಪಲ್ಯಗಳು

MASSOPPU ಮಸ್ಸೊಪ್ಪು

ದಕ್ಷಿಣ ಕರ್ನಾಟಕದ ಜನಪ್ರಿಯ ಸಾರು ಮಸ್ಸೊಪ್ಪು‌. ಬಹುತೇಕ ಮನೆಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಮಾಡುತ್ತಾರೆ. ಮಸೆದ ಸೊಪ್ಪಿನ ಸಾರಿಗೆ ಮಸ್ಸೊಪ್ಪು ಎನ್ನುತ್ತಾರೆ. ಹಿಂದೆ ಒರಳು ಕಲ್ಲು ಅಥವಾ ಖಾರಾ ಮಸೆಯುವ ಕಲ್ಲಿನ ಮೇಲೆ ರುಬ್ಬುತಿದ್ದರು‌. ಆ ರುಚಿಯೇ ಬೇರೆ!!! ಯಾವುದಾದರೂ ಒಂದು ಸೊಪ್ಪು ಮತ್ತು ಬೇಳೆ ಹಾಕಿ ಮಾಡಬಹುದು, ಅಥವಾ ಬೇರೆ ಬೇರೆ ಸೊಪ್ಪು ಸೇರಿಸಿ ಕೂಡ ಮಾಡಬಹುದು. ಮಸಾಲೆ ಕಡಿಮೆ, ರುಚಿ ಮತ್ತು ಆರೋಗ್ಯ ಹೆಚ್ಚು! ಉತ್ತರ ಕರ್ನಾಟಕದ ಜನರಿಗೆ ಈ ಸಾರಿನ ಪರಿಚಯ ಇಲ್ಲದಿರಬಹುದು. ಹಾಗಾದರೆ ನೀವು ಒಮ್ಮೆ ಮಾಡಿ ನೋಡಿ!

ಮಸ್ಸೊಪ್ಪು ಮಾಡುವ ವಿಧಾನ:-

  

1 ಲೋಟ ಬೇಳೆಯನ್ನು ತೊಳೆದು ಕುಕ್ಕರಿನ ತಳದಲ್ಲಿ ಸ್ವಲ್ಪ ನೀರಿನ ಜೊತೆ ಹಾಕಿ, ಮೇಲೆ ತೊಳೆದ 4 ಕಟ್ಟು ಚಕ್ಕೋತನೆ ಸೊಪ್ಪು ಹಾಕಿ, ಅದರ ಮೇಲೆ ಒಂದು ಚಿಕ್ಕ ಬಟ್ಟಲಿನಲ್ಲಿ 1 ಸಿಪ್ಪೆ ಸುಲಿದ ಈರುಳ್ಳಿ, 1 ಗೆಡ್ಡೆ ಬೆಳ್ಳುಳ್ಳಿ, (ಬೆಳ್ಳುಳ್ಳಿ ಬೇಡದಿದ್ದರೆ ಒಗ್ಗರಣೆಗೆ ಇಂಗು ಹಾಕಿ ಮಾಡಬಹುದು)2 ಟೊಮೇಟೋ, 1 ಚಮಚ ಜೀರಿಗೆ, 6 ಹಸಿ ಮೆಣಸಿನ ಕಾಯಿ ಹಾಕಿ (ಚಿತ್ರ ನೋಡಿ), 3 ವಿಷಲ್ ಕೂಗಿಸಿ ತಣ್ಣಗಾದ ಮೇಲೆ ಟೊಮೇಟೋ ಸಿಪ್ಪೆ ತೆಗೆದು ಇಡಿ.

  

ಬಟ್ಟಲಿನಲ್ಲಿರುವದನ್ನು 2 ಚಮಚ ಕಾಯಿ ತುರಿ ಜೊತೆ ಮೆಾದಲು ಸ್ವಲ್ಪ ರುಬ್ಬಿ, ನಂತರ ಸೊಪ್ಪು ಹಾಕಿ 2 ಸುತ್ತು ರುಬ್ಬಿ ಕೊಳ್ಳಿ, ತುಂಬಾ ನುಣ್ಣಗೆ ಮಾಡ ಬೇಡಿ, ಬೇಳೆಯನ್ನು ರುಬ್ಬಬಾರದು. ರುಬ್ಬಿದ ಮಿಶ್ರಣವನ್ನು ಬೆಂದ ಬೇಳೆಗೆ ಹಾಕಿ ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿ, ಕೊನೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಯಾದ ಮಸ್ಸೊಪ್ಪು ಬಿಸಿ ರಾಗಿ ಮುದ್ದೆ, ಅನ್ನ, ಚೂರು ತುಪ್ಪ, ಹಸಿ ಈರುಳ್ಳಿಯೊಂದಿಗೆ ಸವಿಯಲು ಸಿದ್ಧ!

ಧನ್ಯವಾದಗಳು.

Leave a Reply

Your email address will not be published.