Kannada ಸಾಂಬಾರು ಮತ್ತು ಪಲ್ಯಗಳು

BASSARU (MANDYA SPECIAL) ಬಸ್ಸಾರು (ಮಂಡ್ಯದ ವಿಶೇಷ ಸಾರು)

ಹೆಸರೇ ಹೇಳುವಂತೆ ಬಸಿದ ನೀರಿನಿಂದ ಮಾಡುವ ಸಾರು. ರೆಸಿಪಿ ಹೆಸರು ಕೇಳಿದ ತಕ್ಷಣ ನಮ್ಮ ಮಂಡ್ಯ, ರಾಮ ನಗರದ ಜನರ ಬಾಯಲ್ಲಿ ನೀರು ಬರುತ್ತೆ! ( ನನ್ನ ಬಾಯಲ್ಲೂ ) ಹಾಗಾದರೆ ಒಮ್ಮೆ ನೀವುಾ ಮಾಡಿ ನೋಡಿ! ಮಾಡುವುದು ಬಹಳ ಸುಲಭ, ಆದರೆ ಅಷ್ಟೇ ರುಚಿಕರ!!! ಬಸ್ಸಾರಿನ ಜೊತೆ ರಾಗಿ ಮುದ್ದೆ ಇದ್ದರಂತೂ ಇನ್ನೂ ರುಚಿ.

ಬಸ್ಸಾರು ಮಾಡುವ ವಿಧಾನ:-

  

1 ಬಟ್ಟಲು ತೊಗರಿ ಬೇಳೆಯನ್ನು ತೊಳೆದು, 4 ಕಟ್ಟು ತೊಳೆದು ಕತ್ತರಿಸಿದ ದಂಟು ಸೊಪ್ಪಿನ ಜೊತೆ ಕುಕ್ಕರಿನಲ್ಲಿ 1 ಅಥವಾ 2 ವಿಷಲ್ ಕೂಗಿಸಿ ಇಟ್ಟು ಕೊಳ್ಳಿ. (ದಂಟು, ಅರಿವೆ, ಸಬ್ಬಾಕ್ಷಿ ಸೊಪ್ಪು ಸೇರಿಸಿ ಬೇಕಾದರೂ ಮಾಡಬಹುದು, ಅಥವಾ ಯಾವುದಾದರೂ ಒಂದು ಸೊಪ್ಪು ಬಳಸಿ ಮಾಡ ಬಹುದು) ಬೇಳೆ ಪೂರ್ತಿ ಕರಗದ ಹಾಗಿರಬೇಕು. ಬೆಂದ ಬೇಳೆಯ ನೀರನ್ನು ಬಸಿದು ಇಟ್ಟು ಕೊಳ್ಳಿ.

  

1 ಈರುಳ್ಳಿಯನ್ನು ಒಲೆಯ ಮೇಲೆ, ಸಿಪ್ಪೆ ಸಹಿತ ಇಟ್ಟು ಕಡಿಮೆ ಉರಿಯಲ್ಲಿ ಎಲ್ಲಾ ಕಡೆ ಬೇಯಿಸಿ ಸಿಪ್ಪೆ ತೆಗೆದು (ಚಿತ್ರ ನೋಡಿ), 4 ಚಮಚ ಸಾಂಬಾರ್ ಪುಡಿ, 1 ಚಮಚ ಹಸಿ ಜೀರಿಗೆ, 2 ಚಮಚ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನೊಂದಿಗೆ ರುಬ್ಬಿ, ಬಸಿದ ನೀರಿಗೆ ಹಾಕಿ, ಉಪ್ಪು ಹುಣಿಸೆ ರಸ ಹಾಕಿ ಕುದಿಸಿ, ಕೊನೆಯಲ್ಲಿ ಸಾಸಿವೆ, ಹಿಂಗು, ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಯಾದ ಬಸ್ಸಾರು ಸಿದ್ಧ.

  

ಬೆಳ್ಳುಳ್ಳಿ ಇಷ್ಟ ಪಡುವವರು ರುಬ್ಬುವಾಗ 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ರುಬ್ಬಿ, ಒಗ್ಗರಣೆಗೆ ಬೇಕಾದರೆ ಜಜ್ಜಿ ಹಾಕಬಹುದು, ನಮ್ಮ ಮನೆಯಲ್ಲಿ ಬೆಳ್ಳುಳ್ಳಿ ಹೆಚ್ಚು ಉಪಯೋಗಿಸುವುದಿಲ್ಲ. ಹಾಗಾಗಿ ಹಿಂಗಿನ ಒಗ್ಗರಣೆ!!!

ಬಸಿದ ಸೊಪ್ಪು ಬೇಳೆಗೆ, ಸಾಸಿವೆ, ಜೀರಿಗೆ, ಕರಿಬೇವು, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, ಉಪ್ಪು (ನಿಂಬೆ ರಸ optional)ಸೇರಿಸಿ ಒಗ್ಗರಣೆ ಹಾಕಿದರೆ, ರುಚಿಯಾದ, ಆರೋಗ್ಯಕರವಾದ ಪಲ್ಯ ಸಿದ್ಧ‌. ಬಸ್ಸಾರು, ಸೊಪ್ಪಿನ ಪಲ್ಯ, ಬಿಸಿ ರಾಗಿ ಮುದ್ದೆ, 1 ಚಮಚ ತುಪ್ಪ! ಆಹಾ ! ಇದನ್ನು ತಿಂದೇ ನೋಡಬೇಕು! ಸೊಪ್ಪಿನ ಬದಲು ಕ್ಯಾಬೇಜ್ ಮತ್ತು ಬೇಳೆ ಅಥವಾ ಹುರುಳೀ ಕಾಯಿ ಮತ್ತು ಬೇಳೆ ಹಾಕಿ ಬಸ್ಸಾರು ಮಾಡಬಹುದು, ಒಮ್ಮೆ ಮಾಡಿ ರುಚಿ ನೋಡಿ.

ದಂಟು ಸೊಪ್ಪಿಗೆ ರಾಜಾಗಿರಿ ಸೊಪ್ಪು ಎಂದೂ ಕೂಡ ಕರೆಯುತ್ತಾರೆ. ಇದು ಕೆಂಪು ಬಣ್ಣದಲ್ಲಿ ಕೂಡ ಸಿಗುತ್ತೆ.

ಧನ್ಯವಾದಗಳು.

Leave a Reply

Your email address will not be published.