Kannada ಹಬ್ಬದ ಅಡುಗೆಗಳು

SWEET AND KHARA KADUBU ಸಿಹಿ ಮತ್ತು ಖಾರಾ ಕಡುಬು

ಇನ್ನೇನು ಶ್ರಾವಣ ಮಾಸ ಹತ್ತಿರ ಬರುತ್ತಾ ಇದೆ! ಹಬ್ಬಗಳ ಸಾಲು ಸಾಲಾಗಿ ಬರುತ್ತಿವೆ! ಪ್ರತಿ ದಿನ ಸಿಹಿ ತಿಂಡಿ ಮಾಡಬೇಕು. ಈ ಕಡುಬು ಒಮ್ಮೆ ಮಾಡಿ ನೋಡಿ.

ಸಾಮಾನ್ಯವಾಗಿ ಕಡುಬನ್ನು ಅಕ್ಕಿ ಹಿಟ್ಟು ಬೇಯಿಸಿ ಮಾಡುತ್ತಾರೆ. ಆದರೆ ಅಕ್ಕಿಯನ್ನು ನೆನೆಸಿ ಕಾಯಿ ತುರಿಯೊಂದಿಗೆ ರುಬ್ಬಿ, ಬೇಯಿಸಿ, ಹಲಸಿನ ಎಲೆಯಲ್ಲಿ ಕೋನ್ ಆಕಾರದಲ್ಲಿ ಮಾಡುವುದೇ ಈ ಕಡುಬಿನ ವಿಶೇಷತೆ!

ಕೋನ್ ಮಾಡಲು:-

ಹಲಸಿನ ಎಲೆಗಳನ್ನು ಚೆನ್ನಾಗಿ ತೊಳೆದು ತೊಟ್ಟುಗಳನ್ನು ತೆಗೆದು ಕೋನ್ ಆಕಾರದಲ್ಲಿ ಸುತ್ತಿ ಕಡ್ಡಿ ಚುಚ್ಚಿದರೆ ಕೋನ್ ಗಳು ಸಿದ್ಧ! (ಚಿತ್ರ ನೋಡಿ)

   

 

ಸಿಹಿ ಕಡುಬು

   

1/2 ತೆಂಗಿನ ಕಾಯಿ ತುರಿದು ಇಡಿ. 1/4 ಕೇಜಿ ಬೆಲ್ಲ ತುರಿದಿಡಿ. ಬಾಣಲೆಯಲ್ಲಿ ತುರಿದ ಬೆಲ್ಲ ಹಾಕಿ ಸ್ವಲ್ಪ ನೀರು ಸೇರಿಸಿ ಬೆಲ್ಲ ಬಿಸಿಯಾಗಿ ಕರಗಿದಾಗ ಕಾಯಿ ತುರಿ ಹಾಕಿ ಸ್ವಲ್ಪ ಗಟ್ಟಿಯಾಗಿ ಆಗುವವರೆಗೆ ಕುದಿಸಿ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಒಲೆಯಿಂದ ಇಳಿಸಿ ತಟ್ಚೆ ಮುಚ್ಚಿಡಿ.

 

ಖಾರಾ ಕಡುಬು

ಮಾಡುವ ವಿಧಾನ:-

1 ಲೋಟ ಕಡಲೇ ಬೇಳೆ ತೊಳೆದು 2 ಗಂಟೆ ನೆನೆಸಿ, ನಂತರ ನೀರು ಸೋರಿ ಹಾಕಿ 4 ಹಸಿ ಮೆಣಸಿನ ಕಾಯಿ ಹಾಕಿ ತರಿ ತರಿಯಾಗಿ ರುಬ್ಬಿಡಿ. ಹೆಚ್ಚಿದ ಕೊತ್ತಂಬರಿ ಸೊಪ್ಪು, 4 ಚಮಚ ಕಾಯಿ ತುರಿ, ಉಪ್ಪು, ಚಿಟಿಕೆ ಇಂಗು ಹಾಕಿ ಕಲೆಸಿಡಿ.

   

 

ಕಣಕ ಮಾಡುವ ವಿಧಾನ:-

    

1 ಲೋಟ ಅಕ್ಕಿಯನ್ನು ತೊಳೆದು 2 ಗಂಟೆ ನೆನೆಸಿಡಿ. 1/2 ಹೋಳು ಕಾಯಿ ತುರಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ದೋಸೆ ಹಿಟ್ಟಿನ ಹದಕ್ಕೆ ಸ್ವಲ್ಪ ನೀರು ಸೇರಿಸಿ, ಚಿಟಿಕೆ ಉಪ್ಪು ಹಾಕಿ ದಪ್ಪ ತಳದ ಬಾಣಲೆಯಲ್ಲಿ ಬೇಯಲು ಇಡಿ. ಮಧ್ಯಮ ಉರಿಯಲ್ಲಿ ತಿರುಗಿಸುತ್ತಾ ಬೇಯಿಸಿ. ಕೈ ಬಿಟ್ಟರೆ ಗಂಟಾಗುತ್ತದೆ. ತಳದಿಂದ ತಿರುಗಿಸುತ್ತಾ ಬೇಯಿಸಿ ಸ್ವಲ್ಪ ಗಟ್ಟಿಯಾಗಿ ಆಗುವಷ್ಟರಲ್ಲಿ ಒಲೆಯಿಂದ ಇಳಿಸಿ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿದರೆ ಕಣಕ ರೆಡಿ! (ಒದ್ದೆ ಕೈಯಿಂದ ಮುಟ್ಟಿದರೆ ಅಂಟದೆ ಇರುವ ತನಕ ಬೇಯಿಸಿದರೆ ಸಾಕು. ಹಾಲು ಬಾಯಿ ಅಷ್ಚು ಗಟ್ಟಿಯಾಗಿ ಬೇಡ)

 

ಕಡುಬು ಮಾಡಲು:-

ಹಲಸಿನ ಕೋನ್ ಗಳ ಒಳಗೆ ಕಣಕದ ಹಿಟ್ಟನ್ನು ಬೆರಳಿನಿಂದ ಸುತ್ತಲೂ ಸವರಿ, ಸಿಹಿ ಅಥವಾ ಖಾರಾ ಹೂರಣ ತುಂಬಿ ಸ್ವಲ್ಪ ಒತ್ತಿ ಮೇಲೆ ಮುಚ್ಚಳದಂತೆ ಇನ್ನು ಸ್ವಲ್ಪ ಹಿಟ್ಟು ಮೆತ್ತಿ ಕೋನ್ ಪೂರ್ಣವಾಗುವಂತೆ ಮಾಡಿ. ಎಲ್ಲಾ ಕೋನ್ ಗಳು ಮಾಡಿದ ನಂತರ ಸಿಹಿ ಕಡುಬುಗಳನ್ನು ಬೇರೆ ಬಟ್ಟಲಿನಲ್ಲಿ, ಖಾರಾ ಕಡುಬು ಬೇರೆ ಬಟ್ಟಲಿನಲ್ಲಿ ಹಾಕಿ 10 ರಿಂದ 12 ನಿಮಿಷ ಹಬೆಯಲ್ಲಿ ಬೇಯಿಸಿ.

      

ನಂತರ ಬೆಂದ ಕಡುಬುಗಳ ಮೇಲಿರುವ ಎಲೆ ತೆಗೆದು ಬಿಸಿ ಬಿಸಿಯಾಗಿ ತುಪ್ಪದೊಡನೆ ಸವಿಯಿರಿ!

ಈ ರೀತಿ ಮಾಡಿದ ಕಡುಬುಗಳು ಹಲಸಿನ ಸುವಾಸನೆಯಿಂದ ತುಂಬಾ ಚೆನ್ನಾಗಿರುತ್ತದೆ!

   

ಹಲಸಿನ ಎಲೆ ಸಿಗದಿದ್ದವರು ಬಾಳೆ ಎಲೆಯನ್ನು ತೊಳೆದು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಕಣಕದ ಹಿಟ್ಟನ್ನು ಕೈಯಿಂದ ಸವರಿ ಮಧ್ಯದಲ್ಲಿ ಹೂರಣದ ಉಂಡೆ ಇಟ್ಟು ಮಡಚಿ ಇದೇ ರೀತಿ ಹಬೆಯಲ್ಲಿ ಬೇಯಿಸಿ ಮಾಡಬಹುದು. ಕೋನ್ ತರಹ ಆಗುವುದಿಲ್ಲ ಸಾಧಾರಣ ಕಡುಬಿನ ಆಕಾರದಲ್ಲಿ ಮಾಡಬಹುದು.

ಧನ್ಯವಾದಗಳು.

Leave a Reply

Your email address will not be published.