Kannada Tindi Tinisu ಖಾರ ತಿನಿಸುಗಳು

RAVA KODUBALE ರವಾ ಕೋಡುಬಳೆ

ಕೋಡುಬಳೆ ಎಲ್ಲರ ಅಚ್ಚು ಮೆಚ್ಚಿನ ತಿಂಡಿ! ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಕೋಡುಬಳೆ ಇದ್ದರೆ ಎಷ್ಟು ಚೆನ್ನ ಅಲ್ಲವೇ?

ಮಾಡುವ ವಿಧಾನ:-

1 ಬಟ್ಟಲು ಚಿರೋಟಿ ರವೆ ಹುರಿಯದೆ ಹಸಿಯಾಗೆ 1 ದೊಡ್ಡ ಬಟ್ಟಲಿನಲ್ಲಿ ಹಾಕಿಡಿ.

1/4 ಬಟ್ಟಲು ಕಾಯಿ ತುರಿ 4 ಅಥವಾ 5 ಹಸಿ ಮೆಣಸಿನಕಾಯಿ ಜೊತೆಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ಚಟ್ನಿಯ ಹಾಗೆ ರುಬ್ಬಿ. ಖಾರಾ ನಿಮಗೆ ಬೇಕಾಗುವಷ್ಟು ಹಾಕಿ.

1 ಹಿಡಿ ಕರಿಬೇವು ಸಣ್ಣಗೆ ಹೆಚ್ಚಿ ಅಥವಾ Mixie ಯಲ್ಲಿ ಸುಮ್ಮನೆ ಒಂದು ಸುತ್ತು ಸುತ್ತಿಸಿ ರವೆಗೆ ಹಾಕಿ.

1 ಚಮಚ ಬೆಣ್ಣೆ ಬಿಸಿ ಮಾಡದೆ ಹಾಗೆ ಹಾಕಿ.

1 ಚಿಕ್ಕ ಚಮಚ ಜೀರಿಗೆ, ಬಿಳಿ ಎಳ್ಳು ಹುರಿಯದೆ ರವೆಗೆ ಸೇರಿಸಿ. ಸಾಧಾರಣವಾಗಿ ಕೋಡುಬಳೆಗೆ ಜೀರಿಗೆ, ಎಳ್ಳು ಹಾಕುವುದಿಲ್ಲ. ನಿಮಗೆ ಬೇಕಾದರೆ ಹಾಕಿ. ಹಾಕಿದರೆ ರುಚಿ ಚೆನ್ನಾಗಿರುತ್ತದೆ!

   

ರುಚಿಗೆ ತಕ್ಕಷ್ಟು ಉಪ್ಪು, 1/4 ಚಮಚ ಇಂಗು ಸೇರಿಸಿ.

ರುಬ್ಬಿದ ಮಿಶ್ರಣವನ್ನು ರವೆಗೆ ಸೇರಿಸಿ ಚೆನ್ನಾಗಿ ಕಲೆಸಿ. ರುಬ್ಬಿದ ಮಿಶ್ರಣದಲ್ಲಿರುವ ನೀರಿನಂಶವೇ ಸಾಕಾಗುವುದು. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ ಕೋಡುಬಳೆ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ 15 ನಿಮಿಷ ಮುಚ್ಚಿಡಿ.

ನಂತರ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿ, ಕೈಗೆ ಸ್ವಲ್ಪ ಎಣ್ಣೆ ಸವರಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ನಾದಿ ಕೋಡುಬಳೆ ಮಾಡಿ ಕಾದ ಎಣ್ಣೆಯಲ್ಲಿ ಮಧ್ಯಮ ಅಥವಾ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ರವಾ ಕೋಡುಬಳೆ ಸಿದ್ಧ!

   

ಈ ಕೋಡುಬಳೆ ಹೆಚ್ಚು ಎಣ್ಣೆ ಹೀರುವುದಿಲ್ಲ!. ಗರಿ ಗರಿಯಾಗಿ ಇರುತ್ತದೆ!

ಹಸಿ ಮೆಣಸಿನಕಾಯಿ ಬದಲಾಗಿ ನೀವು ಬೇಕಾದರೆ ಒಣ ಮೆಣಸಿನಕಾಯಿ ಅಥವಾ ಬ್ಯಾಡಗಿ ಮೆಣಸಿನಕಾಯಿ ಹಾಕಿ ಕೂಡ ಮಾಡಬಹುದು!

ಧನ್ಯವಾದಗಳು

 

Leave a Reply

Your email address will not be published.