Kannada ಉಪಹಾರ

SOPPINA RAVE IDLI ಸೊಪ್ಪಿನ ರವೆ ಇಡ್ಲಿ

ರವೆ ಇಡ್ಲಿ ಎಲ್ಲರೂ ಮಾಡುತ್ತಾರೆ, ಮನೆರ
ಯಲ್ಲೂ ಮಾಡುತ್ತಾರೆ, ರೆಡಿ ಮೇಡ್ ಕೂಡಾ ಸಿಗುತ್ತದೆ! ಅದರಲ್ಲಿ ಏನು ವಿಶೇಷ ಅಂದಿರಾ?ರವೆಯನ್ನು ಹುರಿಯದೆ, ಧಾರಾಳವಾಗಿ ಸೊಪ್ಪು ಹಾಕಿ, ತಾಜಾ ಮೊಸರು ಹಾಕಿ ಮಾಡುವುದೇ ಈ ರೆಸಿಪಿ ವಿಶೇಷ!!

ಸಾಮಾನ್ಯವಾಗಿ ರವೆ ಇಡ್ಲಿ ಎಲ್ಲರೂ ಹುರಿದು ಮಾಡುವುದು. ಹುರಿಯದ ರವೆ ಹಾಕಿ ಒಮ್ಮೆ ಮಾಡಿ ನೋಡಿ!

ಮಾಡುವ ವಿಧಾನ:-

1 ಪಾವು ಮೀಡಿಯಂ ರವೆ ( ಉಪ್ಪಿಟ್ಟು ರವೆ) ಒಂದು ಬಟ್ಟಲಿನಲ್ಲಿ ಹಾಕಿಡಿ.

2 ಕಟ್ಟು ಪಾಲಾಕ್, 2 ಕಟ್ಟು ಮೆಂತ್ಯ, 1/2 ಕಟ್ಟು ಕೊತ್ತಂಬರಿ ಸೊಪ್ಪು ತೊಳೆದು, ಸಣ್ಣಗೆ ಹೆಚ್ಚಿಡಿ. ಸೊಪ್ಪು ಹೆಚ್ಚು ಹಾಕಿದಷ್ಟೂ ಚೆಂದ! ಕಟ್ಟಿನ ಅಳತೆ ಒಂದೊಂದು ಊರಲ್ಲಿ ಬೇರೆ ಬೇರೆ ಇರುತ್ತದೆ. ನಿಮಗೆ ಬೇಕಾಗುವಷ್ಟು ಹಾಕಿ ಮಾಡಿ.

    

ಬೆಳಗ್ಗೆ ಇಡ್ಲಿ ಮಾಡುವುದಾದರೆ ರಾತ್ರಿ ಮೊಸರು ಹೆಪ್ಪು ಹಾಕಿಡಿ. ರಾತ್ರಿಗೆ ಮಾಡುವುದಾದರೆ ಬೆಳಗ್ಗೆ ಮೊಸರು ಹೆಪ್ಪು ಹಾಕಿಡಿ. ರೆಡಿ ಮೇಡ್ ಮೊಸರಿಗಿಂತ ಮನೆಯಲ್ಲಿ ಮಾಡಿದ ಮೊಸರಾದರೆ ಒಳ್ಳೆಯದು. ಸಾಧ್ಯವಾದಷ್ಟೂ ಮನೆ ಮೊಸರು ಹಾಕಿ.

ಚಿಕ್ಕ ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ, ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಇಂಗು ಹಾಕಿ ಒಗ್ಗರಣೆ ಮಾಡಿ ರವೆಯ ಮೇಲೆ ಬಿಸಿ ಬಿಸಿ ಒಗ್ಗರಣೆ ಹರಡುವಂತೆ ಹಾಕಿ. ಎಣ್ಣೆ ಚೆನ್ನಾಗಿ ಕಾದಿರಲಿ. ಸ್ವಲ್ಪ ಹೆಚ್ಚೇ ಎಣ್ಣೆ ಬೇಕಾಗುತ್ತದೆ. ಸ್ವಲ್ಪ ಸಮಯದ ನಂತರ ಉಪ್ಪು, 1/4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ.
ಹೆಚ್ಚಿದ ಸೊಪ್ಪು, ಸಿಹಿಯಾದ, (Fresh curds) ಗಟ್ಟಿಯಾದ ಮೊಸರು ಸೇರಿಸಿ ಕಲೆಸಿ.

ಸ್ವಲ್ಪ ಸೋಡಾ 1 ಚಮಚ ಮೊಸರಿನಲ್ಲಿ ಕಲೆಸಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿ. ಇಡ್ಲಿ ಹಿಟ್ಟು ಸ್ವಲ್ಪ ಗಟ್ಟಿಯಾಗಿ ಇರಲಿ. ಮೊಸರು ಜಾಸ್ತಿ ಆದರೆ ಇಡ್ಲಿ ಮೆತ್ತಗಾಗುತ್ತೆ!

   

ಇಡ್ಲಿ ಪ್ಲೇಟ್ ಗೆ ಎಣ್ಣೆ ಸವರಿ, ಮುಕ್ಕಾಲು ಭಾಗ ಮಿಶ್ರಣ ಹಾಕಿ, ಹಬೆಯಲ್ಲಿ 12 ರಿಂದ 15 ನಿಮಿಷ ಬೇಯಿಸಿದರೆ, ರುಚಿಯಾದ, ಮೃದುವಾದ ರವೆ ಇಡ್ಲಿ ಸಿದ್ಧ!

ಸೊಪ್ಪು ಬೇಡದಿದ್ದರೆ ಇದೇ ವಿಧಾನದಲ್ಲಿ ಸಾಧಾರಣ ರವೆ ಇಡ್ಲಿ ಮಾಡಿ ಕೊಳ್ಳಬಹುದು.

  

ಈ ರೆಸಿಪಿ ನನ್ನ ಆತ್ಮೀಯ ಗೆಳತಿ ಉಮಾ ವಸಂತ್ ಅವರು ಹೇಳಿ ಕೊಟ್ಟಿದ್ದು! ಧನ್ಯವಾದಗಳು ಉಮಾ!

ಧನ್ಯವಾದಗಳು.

 

Leave a Reply

Your email address will not be published.