Kannada Oota ಉಪಹಾರ

NAVARATHAN PALAV ನವರತನ್ ಪಲಾವ್

ಹೆಸರು ಕೇಳಿ ಯಾವುದೋ ಒಡವೆ ಅಂದು ಕೊಂಡಿರಾ!. ಅಯ್ಯೋ ರಾಮ ಇದು ಅಡುಗೆ ಅರಮನೆ ರೀ! ಇಲ್ಲಿ ಕೇವಲ ಅಡುಗೆ ಬಗ್ಗೆ ಮಾತ್ರ ಪೋಸ್ಟ್ ಹಾಕಬೇಕು. ಇದು ಒಂದಾನೊಂದು ಕಾಲದಲ್ಲಿ ಒಬ್ಬರು ಗುಜರಾತಿ ಮಹಿಳೆಯಿಂದ, 1,500 ಸಾವಿರ ಕೊಟ್ಟು ಕಲಿತ 10 ರೆಸಿಪಿಗಳಲ್ಲಿ ಇದೂ ಒಂದು!

ಮಾಡುವ ವಿಧಾನ:-

ಹುರುಳಿ ಕಾಯಿ, ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ, ಗೋಭಿ ಇಷ್ಟು ತರಕಾರಿಗಳನ್ನು ಕುಕ್ಕರಿನಲ್ಲಿ ನೀರು ಹಾಕಿಮುಚ್ಚಳ ಹಾಕದೆ ಸ್ವಲ್ಪ ಬೇಯಿಸಿಡಿ. ( Half boiled)

1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಹಾಕಿ 1 ಇಂಚು ಚಕ್ಕೆ, ಲವಂಗ4, 2 ಏಲಕ್ಕಿ, 1 ಪಲಾವ್ ಎಲೆ, 1/2 ಚಮಚ ತುಪ್ಪ ಹಾಕಿ ಬೇಯಿಸಿ ನೀರು ಸೋರಿ ಹಾಕಿಡಿ.

1 ಈರುಳ್ಳಿ, 1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ.

1 ಇಂಚು ಶುಂಠಿ ಸಿಪ್ಪೆ ತೆಗೆದು, 1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ, 4 ಹಸಿ ಮೆಣಸಿನಕಾಯಿ ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

2 ಚಮಚ ಬಿಸಿ ಹಾಲಿಗೆ ಸ್ವಲ್ಪ ಕೇಸರಿ ದಳ ಹಾಕಿಡಿ.

ತುಪ್ಪದಲ್ಲಿ ಸ್ವಲ್ಪ Dry fruits ಮತ್ತು ಸ್ವಲ್ಪ ಪನ್ನೀರ್ ತುಂಡುಗಳನ್ನು ಹುರಿದಿಡಿ.

  

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ. ಎಣ್ಣೆ ಬೇಕಾದರೆ ಹಾಕಬಹುದು. ಆದರೆ ತುಪ್ಪ ಒಳ್ಳೆಯ ರುಚಿ ಕೊಡುತ್ತದೆ. ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಹುರಿದು, ನಂತರ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ತರಕಾರಿಗಳು, ಬಾಸುಮತಿ ಅನ್ನ, ಕೇಸರಿ ಹಾಲು, ಉಪ್ಪು ಹಾಕಿ ಮೃದುವಾಗಿ ಕಲೆಸಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ ಕೊನೆಯಲ್ಲಿ ಹುರಿದ ಪನ್ನೀರ್, ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿದರೆ ರುಚಿಯಾದ, ವಿಶಿಷ್ಟ ರುಚಿಯ ನವರತನ್ ಪಲಾವ್ ಸಿದ್ಧ!

ಬೇಕಾದರೆ ಹೆಚ್ಚಿದ ಸೇಬು, ಪೈನಾಪಲ್ ಕೊನೆಯಲ್ಲಿ ಬಡಿಸುವಾಗ ಹಾಕಬಹುದು! ತುಂಬಾ ಚೆನ್ನಾಗಿರುತ್ತದೆ!

ಇದರ ಜೊತೆಗೆ ಮೊಸರು ಬಜ್ಜಿ ಅಥವಾ ಶೊರ್ಬಾ ( plain gravy sl. no. 217 A) ಇದ್ದರೆ ತುಂಬಾ ಒಳ್ಳೆಯ ಕಾಂಬಿನೇಶನ್!

ಧನ್ಯವಾದಗಳು.

Leave a Reply

Your email address will not be published.