“Made for eact other” ಅಂತಾರಲ್ಲಾ ಹಾಗೇ ಒಂದಕ್ಕೊಂದು ಹೇಳಿ ಮಾಡಿಸಿದ ಆಹಾರ ಇದು! ಮದುವೆ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಎಲ್ಲರಿಗೂ ಇಷ್ಟವಾಗುವ ಆಹಾರ!
ಮಾಡುವ ವಿಧಾನ:-
ಘೀ ರೈಸ್
1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿಡಿ.
1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.
1 ಪಾವು ಕಾಯಿ ಹಾಲು ತೆಗೆದಿಡಿ. ಅಥವಾ ಹಸುವಿನ ಹಾಲಾದರೂ ಪರವಾಗಿಲ್ಲ. ನಾನು ಹಸುವಿನ ಹಾಲು ಹಾಕಿರುವುದು. ಸೂಪರ್ ಆಗಿರುತ್ತದೆ ರುಚಿ!
ಹೆಸರೇ ಹೇಳುವಂತೆ ಈ ರೆಸಿಪಿಯಲ್ಲಿ ತುಪ್ಪದ ಒಗ್ಗರಣೆ ಹಾಕಬೇಕು. ಕುಕ್ಕರಿನಲ್ಲಿ 6 ಚಮಚ ತುಪ್ಪ ಹಾಕಿ ಹೆಚ್ಚಿದ ಈರುಳ್ಳಿ, ಸ್ವಲ್ಪ ಗೋಡಂಬಿ, 1 ಪಲಾವ್ ಎಲೆ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಮರಾಠಿ ಮೊಗ್ಗು, 1 ಅನಾನಸ್ ಹೂ ಹಾಕಿ ಸ್ವಲ್ಪ ಹುರಿದು, ನಂತರ ನೆಂದ ಸೋರಿ ಹಾಕಿದ ಬಾಸುಮತಿ ಅಕ್ಕಿ, ಉಪ್ಪು ಹಾಕಿ ಸ್ವಲ್ಪ ಹುರಿದು, 1 ಅಳತೆ ಹಾಲು/ ಕಾಯಿ ಹಾಲು, 1 ಅಳತೆ ನೀರು ಹಾಕಿ ಚೆನ್ನಾಗಿ ಕಲೆಸಿ, ಕುಕ್ಕರಿಗೆ ಸರಿ ಹೊಂದುವ ಯಾವುದಾದರೂ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಅಕ್ಕಿ ಪೂರ್ತಿಯಾಗಿ ಬೇಯುವವರೆಗೆ ಬೇಯಿಸಿದರೆ ರುಚಿಯಾದ ಘಮ ಘಮಿಸುವ ಘೀ ರೈಸ್ ಸಿದ್ಧ!
ಅಕ್ಕಿ ನೆನೆಸುವುದರಿಂದ ಬೇಗ ಬೇಯುತ್ತದೆ. ಆದರೆ ಮಧ್ಯದಲ್ಲಿ ಒಂದು ಫೋರ್ಕ್ ನಿಂದ ಎಚ್ಚರಿಕೆಯಿಂದ ಆಗಾಗ ಅಕ್ಕಿ ತುಂಡಾಗದಂತೆ ನಿಧಾನವಾಗಿ ಕಲೆಸುವುದನ್ನು ಮರೆಯಬೇಡಿ! ನಾನು ಘೀ ರೈಸ್ ಗೆ ಖಾರಾ ಹಾಕುವುದಿಲ್ಲ. ಬೇಕಾದವರು 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಒಗ್ಗರಣೆಗೆ ಹಾಕಿ ಕೊಳ್ಳಬಹುದು.
ವೆಜಿಟೇಬಲ್ ಕುರ್ಮಾ ಮಾಡುವ ವಿಧಾನ:-
ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ 1 ವಿಷಲ್ ಕೂಗಿಸಿಡಿ.
4 ಚಮಚ ಕಾಯಿ ತುರಿದಿಡಿ.
1 ಚಮಚ ಗಸಗಸೆ, 1 ಚಮಚ ಧನಿಯಾ, 1/2 ಇಂಚು ಚಕ್ಕೆ, 2 ಲವಂಗ, 1 ಏಲಕ್ಕಿ ಸ್ವಲ್ಪ ಹುರಿದು, 1 ಚಮಚ ಹುರಿಗಡಲೆ ಸೇರಿಸಿ, ಬಿಸಿಯಿದ್ದಾಗಲೇ ನುಣ್ಣಗೆ ಪುಡಿ ಮಾಡಿಡಿ. 4 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ.
ಎಲ್ಲಾ ಪುಡಿಗಳು, ಕಾಯಿ ತುರಿ, 2 ಹಸಿ ಮೆಣಸಿನಕಾಯಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.
1 ಈರುಳ್ಳಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಈರುಳ್ಳಿ, ಟೋಮೇಟೋ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಬೆಂದ ತರಕಾರಿ, ಉಪ್ಪು, ಸ್ವಲ್ಪ ನೀರು ಬೇಕಾದರೆ ಹಾಕಿ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ವೆಜಿಟೇಬಲ್ ಕುರ್ಮಾ ರೆಡಿ!
ಈ ಕುರ್ಮಾ ಪೂರಿ, ಚಪಾತಿ, ರವೆ ಇಡ್ಲಿ ಜೊತೆಗೆ ಕೂಡ ತುಂಬಾ ಚೆನ್ನಾಗಿರುತ್ತದೆ!
ವಿನೆಗರ್ ಆನಿಯನ್ ಮಾಡುವ ವಿಧಾನ:-
ಈರುಳ್ಳಿ ಸಿಪ್ಪೆ ತೆಗೆದು 1 ಗಂಟೆ ಕಾಲ ನೀರಿನಲ್ಲಿ ಹಾಕಿಡಿ. ನಂತರ ನೀರಿನಿಂದ ತೆಗೆದು 1/2 ಚಮಚ ವಿನೆಗರ್, ಉಪ್ಪು, ಪೆಪ್ಪರ್ ಪುಡಿ ಹಾಕಿ ಕಲೆಸಿ ಊಟದ ಜೊತೆಗೆ ಬಡಿಸಿ. ನೀರಿನಲ್ಲಿ ನೆನೆಸುವುದರಿಂದ ಈರುಳ್ಳಿಯ ಖಾರದ ಅಂಶ ಕಡಿಮೆ ಆಗುತ್ತದೆ. ನಾನು ಹಾಕಿರುವುದು ಸಾಂಬಾರ್ ಈರುಳ್ಳಿ. ನೀವು ಬೇಕಾದರೆ ಸಾಧಾರಣ ಈರುಳ್ಳಿ ಸಿಪ್ಪೆ ತೆಗೆದು ಗುಂಡು ಗುಂಡಾಗಿ ಕತ್ತರಿಸಿ ಹಾಕಬಹುದು.
ಘೀ ರೈಸ್ ಮತ್ತು ಕುರ್ಮಾ ಬೇರೆ ಬೇರೆ ವಿಧಾನಗಳಲ್ಲಿ ಮಾಡುತ್ತಾರೆ. ಇದು ನಾನು ಮಾಡುವ ವಿಧಾನ!
ಧನ್ಯವಾದಗಳು.





