Kannada ಸಾಂಬಾರು ಮತ್ತು ಪಲ್ಯಗಳು

HIDUKIDA BELE SAMBAR ( Saaru) ಹಿದುಕಿದ ಬೇಳೆ ಸಾಂಬಾರ್ (ಸಾರು)

 ಹಿದುಕಿದ ಬೇಳೆ ಸಾಂಬಾರ್ ದಕ್ಷಿಣ ಕರ್ನಾಟಕದ ಬಹು ಜನಪ್ರಿಯ ಸಾಂಬಾರ್! ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಅವರೇ ಕಾಯಿ ಸೀಸನ್ ನಲ್ಲಿ ವಾರಕ್ಕೆರಡು ಬಾರಿಯಾದರೂ ಮಾಡೇ ಮಾಡುತ್ತಾರೆ! ಅಂತಹ ರುಚಿಯಾದ ಹಿದುಕಿದ ಬೇಳೆ ಸಾಂಬಾರ್ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ನಿಮಗಾಗಿ!

ಮಾಡುವ ವಿಧಾನ:-

  

1/2 ಕೇಜಿ (2 ಪಾವು) ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ.

2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

2 ಟೇಬಲ್ ಚಮಚ ಗಸಗಸೆ, 2 ಟೇಬಲ್ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು, ಗಸಗಸೆ ಸ್ವಲ್ಪ ಬಿಸಿಯಿದ್ದಾಗಲೇ ಪುಡಿ ಮಾಡಿಡಿ.

  

12 ರಿಂದ 15 ಒಣ ಮೆಣಸಿನ ಕಾಯಿ (ಕೆಂಪು+ಬ್ಯಾಡಗಿ) ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ. (ಖಾರಾ ನಿಮಗೆ ಬೇಕಾದಷ್ಟು ಹಾಕಿ ಕೊಳ್ಳಿ)

3 ಟೇಬಲ್ ಚಮಚ ಕಾಯಿ ತುರಿದಿಡಿ.

ಹೆಚ್ಚಿದ ಈರುಳ್ಳಿಯಲ್ಲಿ 1 ಚಮಚದಷ್ಟು ಈರುಳ್ಳಿ ಒಗ್ಗರಣೆಗೆ ತೆಗೆದಿಡಿ. ಮಿಕ್ಕ ಈರುಳ್ಳಿ, 2 ಟೀ ಚಮಚ ಜೀರಿಗೆ, 1 ಹಿಡಿ ಹಿದುಕಿದ ಬೇಳೆ, 2 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದಿಡಿ.

  

ಹುರಿದ ಈರುಳ್ಳಿ, ಪುಡಿ ಮಾಡಿದ ಮೆಣಸಿನ ಕಾಯಿ, ಗಸಗಸೆ, ಧನಿಯಾ ಪುಡಿ, ಕಾಯಿ ತುರಿ ಇಷ್ಟನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.

ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, 1 ಚಮಚ ಹೆಚ್ಚಿದ ಈರುಳ್ಳಿ, ಕರಿಬೇವು, ಚಿಟಿಕೆ ಅರಿಷಿಣ, ಹಿದುಕಿದ ಬೇಳೆ ಹಾಕಿ ಸ್ವಲ್ಪ ಹುರಿದು, ನಂತರ ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹುರಿದು, ಉಪ್ಪು ನೀರು ಹಾಕಿ ಕಲೆಸಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿಸಿದರೆ ರುಚಿಯಾದ ಹಿದುಕಿದ ಬೇಳೆ ಸಾಂಬಾರ್ ಸಿದ್ಧ!

ಕೆಲವು ಕುಕ್ಕರಿನಲ್ಲಿ ಕಾಳು ಬೇಗ ಬೇಯುತ್ತದೆ! ನೋಡಿ ಕೊಂಡು ಬೇಕಾದರೆ 1 ವಿಷಲ್ ಕೂಗಿಸಿ. ಕಾಳು ಬೆಂದಿಲ್ಲವೆಂದರೆ ಮುಚ್ಚಳ ಹಾಕದೆ ಹಾಗೇ ಬೇಯಿಸಬಹುದು.

ಈ ಸಾಂಬಾರ್ ರಾಗಿ ಮುದ್ದೆ, ಅನ್ನ, ದೋಸೆ, ಇಡ್ಲಿ, ಪೂರಿ, ಚಪಾತಿ ಎಲ್ಲದರ ಜೊತೆ ತುಂಬಾ ಚೆನ್ನಾಗಿರುತ್ತದೆ! ಮಾಡಿ ನೋಡಿ.

ಈ ಸಾಂಬಾರಿಗೆ ಹುಳಿ ಹಾಕುವುದಿಲ್ಲ‌ , ಹುಳಿ ಬೇಕಾದವರು ತಿನ್ನುವಾಗ ನಿಂಬೆ ರಸ ಹಾಕಿಕೊಳ್ಳಬಹುದು.

ಧನ್ಯವಾದಗಳು.

Leave a Reply

Your email address will not be published.