VEGETABLE KURMA ವೆಜಿಟೇಬಲ್ ಕುರ್ಮಾ
ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತೆ. ಹೋಟೆಲ್ ಶೈಲಿ ಯಲ್ಲಿ ವಿಜೆಟೇಬಲ್ ಕುರ್ಮ ಮಾಡುವ ರೆಸಿಪಿ ಇಲ್ಲಿದೆ.
ವೆಜಿಟೇಬಲ್ ಕುರ್ಮ ಮಾಡುವ ವಿಧಾನ:-
ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು.
4 ಚಮಚ ಕಾಯಿ ತುರಿದಿಡಿ.
1 ಚಮಚ ಗಸಗಸೆ, 1 ಚಮಚ ಧನಿಯ ಸ್ವಲ್ಪ ಹುರಿದು, 1/2 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, 2 ಎಸಳು ಬೆಳ್ಳುಳ್ಳಿ, 10 ಗೋಡಂಬಿ, ಅರ್ಧ ಚಮಚ ಹುರಿಗಡಲೆ , 1/4 ಚಮಚ ಸೋಂಪು ಹಾಕಿ ಪುಡಿ ಮಾಡಿ, ನಂತರ 3 ಹಸಿ ಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.

1 ಈರುಳ್ಳಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ ಹಾಕಿ (ಈ ಮೂರು ಪದಾರ್ಥಗಳನ್ನು ಬಡಿಸುವಾಗ ತೆಗೆದು ಬಿಡಿ, ತಿನ್ನುವಾಗ ಸಿಕ್ಕರೆ ಖಾರಾ ಆಗುತ್ತೆ) ಈರುಳ್ಳಿ, ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ, 1/2 ಚಮಚ ಖಾರದ ಪುಡಿ, ಬೆಂದ ತರಕಾರಿ, ರುಬ್ಬಿದ ಮಿಶ್ರಣ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿದರೆ, ರುಚಿಕರವಾದ ಹೋಟೆಲ್ ಶೈಲಿ ವೆಜಿಟೇಬಲ್ ಕುರ್ಮ ಸಿದ್ಧ!

ನಿಮಗೆ ಸಮಯವಿದ್ದರೆ ತರಕಾರಿಗಳನ್ನು ಈರುಳ್ಳಿ, ಟೋಮೇಟೋ ಹಾಕಿದ ನಂತರ, ಒಗ್ಗರಣೆಯಲ್ಲಿ ಬೇಯಿಸಬಹುದು. ಸಮಯದ ಅಭಾವ ಇರುವವರು ಕುಕ್ಕರಿನಲ್ಲಿ ಬೇಯಿಸಿ ಮಾಡಬಹುದು. ಈ ಕುರ್ಮ ಜೀರಾ ರೈಸ್, ಘೀ ರೈಸ್ ಜೊತೆ ಕೂಡಾ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು 🙏🙏🙏
