Kannada ಚಾಟ್ಸ್

KATORI CHAT ಕಟೋರಿ ಚಾಟ್

ಉತ್ತರ ಭಾರತದ ಜನಪ್ರಿಯ ಚಾಟ್ ಕಟೋರಿ ಚಾಟ್. ಕಟೋರಿ ಎಂದರೆ ಹಿಂದಿಯಲ್ಲಿ ಬಟ್ಟಲು (BOWL) ಎಂದು ಅರ್ಥ! ಪೂರಿಯನ್ನು ಬಟ್ಟಲಿನಂತೆ ಮಾಡಿ ತಿನ್ನುವ ಚಾಟ್! ಸಾಧಾರಣವಾಗಿ ಕಟೋರಿಗಳನ್ನು ಹೋಟೆಲ್ ಗಳಲ್ಲಿ ಬೇಕ್ ಮಾಡುತ್ತಾರೆ, ನಾನು ಎಣ್ಣೆಯಲ್ಲಿ ಕರಿದು ಮಾಡಿದ್ದೇನೆ.

ಮಾಡುವ ವಿಧಾನ:-

       

ಮೊಳಕೆ ಬಂದ ನಿಮ್ಮ ಇಷ್ಟವಾದ ಕಾಳುಗಳನ್ನು ಬೇಯಿಸಿ ಇಡಿ. ನಾನು ಹೆಸರು ಕಾಳು, ಕಾಬೂಲ್ ಕಡಲೆ ಹಾಕಿದ್ದೇನೆ. ನೀವು ಬೇರೆ ಬೇರೆ ಕಾಳು ಮಿಶ್ರಣ ಮಾಡಿ ಅಥವಾ ಯಾವುದೇ ಒಂದು ಕಾಳು ಬೇಕಾದರೂ ಹಾಕಬಹುದು. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬೆಂದ ಕಾಳು, 1/2 ಚಮಚ ಧನಿಯ ಪುಡಿ, 1 ಚಮಚ ಖಾರಾ ಪುಡಿ, ಉಪ್ಪು, ನಿಂಬೆ ರಸ ಹಾಕಿ ಬಾಡಿಸಿಡಿ.

ಈರುಳ್ಳಿ, ಟೊಮೇಟೋ, ಸೌತೇ ಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಕೆ ಹೆಚ್ಚಿಡಿ.

       

1 ಹಿಡಿ ಕೊತ್ತಂಬರಿ ಸೊಪ್ಪು, 1 ಹಿಡಿ ಪುದೀನ, 4 ಹಸಿ ಮೆಣಸಿನ ಕಾಯಿ, 1/2 ನಿಂಬೆ ರಸ, ಉಪ್ಪು ಹಾಕಿ ರುಬ್ಬಿ ಹಸಿರು ಚಟ್ನಿ ಮಾಡಿಡಿ.

4 ಚಮಚ ಹುಣಿಸೆ ರಸ, ಚೂರು ಬೆಲ್ಲ ಹಾಕಿ ಸ್ವಲ್ಪ ಕುದಿಸಿ ಸಿಹಿ ಚಟ್ನಿ ಮಾಡಿಡಿ.

    

ಕಟೋರಿಗಾಗಿ 1 ಲೋಟ ಚಿರೋಟಿ ರವೆ, 1/2 ಲೋಟ ಮೈದಾ, 2 ಚಮಚ ಅಕ್ಕಿ ಹಿಟ್ಟು, 2 ಚಮಚ ತಣ್ಣಗಿರುವ ಬೆಣ್ಣೆ ಉಪ್ಪು, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಡಿ. (ಮೊದಲು ಅಕ್ಕಿ ಹಿಟ್ಟು ಮತ್ತು ಬೆಣ್ಣೆ ಸೇರಿಸಿ ಚೆನ್ನಾಗಿ ಕಲೆಸಿ ನಂತರ ಉಳಿದ ಪದಾರ್ಥಗಳನ್ನು ಸೇರಿಸಿ ಕಲೆಸಿ). ಕಲೆಸಿದ ಮಿಶ್ರಣವನ್ನು 15 ನಿಮಿಷ ಮುಚ್ಚಿಡಿ. ನಂತರ ಸ್ವಲ್ಪ ನಾದಿ ಪೂರಿಗಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿ ಆದಷ್ಟೂ ತೆಳ್ಳಗೆ ಲಟ್ಟಿಸಿ, ಸಣ್ಣ ಸಣ್ಣ steel ಬಟ್ಟಲಿನ (3 ಅಥವಾ 4 ಬಟ್ಟಲು ಇದ್ದರೆ ಬೇಗ ಬೇಗ ಮಾಡಬಹುದು) ಹೊರ ಭಾಗಕ್ಕೆ ಸ್ವಲ್ಪ ಎಣ್ಣೆ ಸವರಿ, ಲಟ್ಟಿಸಿದ ಪೂರಿಯನ್ನು ಬಟ್ಟಲಿಗೆ ಚೆನ್ನಾಗಿ ಅಂಟಿಸಿ, ಸ್ವಲ್ಪ ಒತ್ತಿ, ಪೂರಿಯ ಅಂಚುಗಳನ್ನು ನೆರಿಗೆಯಂತೆ (frill) ಮಾಡಿ (ಚಿತ್ರ ನೋಡಿ) forkನಿಂದ ಅಲ್ಲಲ್ಲಿ ಚುಚ್ಚಿ, (ಹೀಗೆ ಮಾಡಿದರೆ ಪೂರಿ ಉಬ್ಬುವುದಿಲ್ಲ, ಬಟ್ಟಲು ಗರಿ ಗರಿಯಾಗಿ ಇರಬೇಕು) ಬಟ್ಟಲು ಸಮೇತ ಕಾದ ಎಣ್ಣೆಗೆ ಎಚ್ಚರಿಕೆಯಿಂದ ಹಾಕಿ.(ಚಿತ್ರ ನೋಡಿ) ಬಟ್ಟಲು ಬೆಂದ ಮೇಲೆ steel bowl ಅಂಚನ್ನು ಬಿಡುತ್ತದೆ, ಆಗ ಇಕ್ಕಳ ಮತ್ತು ಚಮಚದ ಸಹಾಯದಿಂದ ಎರಡನ್ನೂ ಬೇರೆ ಬೇರೆ ಮಾಡಿ, steel ಬಟ್ಟಲು ಹೊರ ತೆಗೆದು, ಪೂರಿ ಬಟ್ಟಲುಗಳು ಗರಿ ಗರಿಯಾಗಿ ಇರುವಂತೆ, ಎರಡೂ ಕಡೆ ಬೇಯಿಸಿಡಿ. ನಂತರ ಬಟ್ಟಲುಗಳಲ್ಲಿ ಮೊದಲು ಕಾಳಿನ ಮಿಶ್ರಣ ಹಾಕಿ, ನಂತರ ಅದರ ಮೇಲೆ ಮೊಸರು(ಮೊಸರಿಗೆ ಚೂರು ಸಕ್ಕರೆ ಬೇಕಾದರೆ ಹಾಕಿ), ಹಸಿರು ಚಟ್ನಿ, ಸಿಹಿ ಚಟ್ನಿ, ಈರುಳ್ಳಿ, ಟೊಮೇಟೋ, ಸೌತೇ ಕಾಯಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ, ಸೇವ್ ಹಾಕಿ ತಕ್ಷಣ ತಿನ್ನಲು ಕೊಡಿ. ನೆಂದರೆ ಬಟ್ಟಲುಗಳು ಮೆತ್ತಗೆ ಆಗುತ್ತವೆ. ಸ್ವಲ್ಪ ಸಮಯ ಬೇಕಾದರೂ ನೀವೇ ಮಾಡಿ ತಿಂದ ಖುಷಿ ಇರುತ್ತೆ, ಕಟೋರಿಗಳನ್ನು ಬೆಳಗ್ಗೆ ಮಾಡಿ ಡಬ್ಬಗಳಲ್ಲಿ ಹಾಕಿಟ್ಟು, ಸಂಜೆ ಮಿಕ್ಕದ್ದನ್ನು ಮಾಡಬಹುದು. ಮಕ್ಕಳಿಗೂ ಒಳ್ಳೆಯ ಆಹಾರ , 2 ಅಥವಾ 3 ಕಟೋರಿ ತಿಂದರೆ ಹೊಟ್ಟೆ ತುಂಬಿ ಹೋಗುತ್ತೆ!

ಹೊರಗೆ ಹೋಗಿ ತಿನ್ನುವ ಬದಲು ಮನೆಯಲ್ಲಿ ಮಾಡಿದ ಸಂತೋಷವೇ ಬೇರೆ ಅಲ್ಲವೇ? ಹಾಗಾದರೆ ಒಮ್ಮೆ ಮಾಡಿ ನೋಡ್ತೀರಲ್ವಾ???

ಧನ್ಯವಾದಗಳು.

Leave a Reply

Your email address will not be published.