Kannada Oota

PALAK DAL & JEERA RICE ಪಾಲಕ್ ದಾಲ್ ಮತ್ತು ಜೀರಾ ರೈಸ್

ಪಾಲಕ್ ಒಂದು ಆರೋಗ್ಯಕರ ಸೊಪ್ಪು! ಕಬ್ಬಿಣದ ಅಂಶ ಹೇರಳವಾಗಿದೆ! ಬೆಳೆಯುವ ಮಕ್ಕಳಿಗೆ ಬಹಳ ಒಳ್ಳೆಯದು! ಪಾಲಕ್ ಸೊಪ್ಪು ಹಾಕಿ ಒಂದು ರುಚಿಯಾದ, ಆರೋಗ್ಯಕರ ದಾಲ್ ಮಾಡುವ ರೆಸಿಪಿ ಇಲ್ಲಿದೆ.

ಪಾಲಕ್ ದಾಲ್ ಮಾಡುವ ವಿಧಾನ:-

4 ಕಟ್ಟು ಪಾಲಕ್ ಸೊಪ್ಪನ್ನು ತೊಳೆದು, ಸಣ್ಣಗೆ ಹೆಚ್ಚಿಡಿ. 1 ಈರುಳ್ಳಿ, 3 ಟೊಮೇಟೋ ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

   

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, 1 ಟೀ ಚಮಚ ಜೀರಿಗೆ, ಚಿಟಿಕೆ ಅರಿಶಿಣ, ಈರುಳ್ಳಿ, ಟೊಮೇಟೋ ಹಾಕಿ ಬಾಡಿಸಿ. ನಂತರ 1 ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್, ತಲಾ 1 ಚಮಚ ಗರಂ ಮಸಾಲ, ಧನಿಯ ಪುಡಿ, ಜೀರಾ ಪುಡಿ, ಖಾರಾ ಪುಡಿ ಹಾಕಿ, ಸ್ವಲ್ಪ ಬಾಡಿಸಿ 1 ಲೋಟ ತೊಳೆದ ಹೆಸರು ಬೇಳೆ, ಪಾಲಕ್ ಸೊಪ್ಪು ಹಾಕಿ ಹುರಿದು, ಉಪ್ಪು, 2 ಲೋಟ ನೀರು ಹಾಕಿ 1 ವಿಷಲ್ ಕೂಗಿಸಿ, ತಣ್ಣಗಾದ ಮೇಲೆ ಮತ್ತೊಮ್ಮೆ ಕಲೆಸಿ ಜೀರಾ ರೈಸ್/ ಚಪಾತಿ ಜೊತೆ ಬಡಿಸಿ.

ಇದೇ ದಾಲಿಗೆ 1 ಲೋಟ ಬಾಸುಮತಿ ಅಕ್ಕಿಯನ್ನು ಹೆಸರು ಬೇಳೆ, ಪಾಲಕ್ ಜೊತೆ ಹಾಕಿ ಹುರಿದು, 4 ಲೋಟ ನೀರು ಹಾಕಿ ಬೇಯಿಸಿದರೆ, ರುಚಿಯಾದ ಪಾಲಕ್ ದಾಲ್ ಕಿಚಡಿ ಮಾಡಬಹುದು. ನಾನು ಹಿಂದೆ ಈ ರೆಸಿಪಿ ಹಾಕಿದ್ದೆ.

 

ಜೀರಾ ರೈಸ್ ಮಾಡುವ ವಿಧಾನ:-

1 ಲೋಟ ಜೀರಿಗೆ ಅಕ್ಕಿ ತೊಳೆದು 1 ಲೋಟ ನೀರು ಹಾಕಿ ಅನ್ನ ಮಾಡಿ, ತಟ್ಟೆಗೆ ಹಾಕಿ ಅಗುಳು ಬಿಡಿ ಬಿಡಿ ಆಗುವಂತೆ ಹರಡಿಡಿ. (ಅಕ್ಕಿಯ ಫೋಟೋ ಹಾಕಿದ್ದೇನೆ, ನೀವು ಬೇಕಾದರೆ ಬಾಸುಮತಿ ಅಕ್ಕಿ ಹಾಕಿ, 1 ಅಳತೆ ಅಕ್ಕಿಗೆ 1 3/4 ಲೋಟ ನೀರು ಹಾಕಿ ಕೂಡ ಮಾಡಬಹುದು, ಇಲ್ಲದಿದ್ದರೆ ತೆರೆದ ಕುಕ್ಕರಿನಲ್ಲಿ ಬೇಯಿಸಿ ಬಸಿದು ಕೂಡ ಮಾಡಬಹುದು).

   

1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.

   

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ, 3 ಏಲಕ್ಕಿ, 6 ಲವಂಗ, 1 ಇಂಚು ಚಕ್ಕೆ ಹಾಕಿ, ಬಾಡಿಸಿ, ಉದುರುದುರಾಗಿ ಮಾಡಿದ ಅನ್ನ, ಉಪ್ಪು ಹಾಕಿ ಕಲೆಸಿ, ಸಣ್ಣ ಉರಿಯಲ್ಲಿ ತಟ್ಟೆ ಮುಚ್ಚಿ 2 ಅಥವಾ 3 ನಿಮಿಷ ಬಿಸಿ ಮಾಡಿ, ಪಾಲಕ್ ದಾಲ್ ಜೊತೆ ಬಡಿಸಿ. ಎರಡೂ ಸುಲಭವಾದ, ರುಚಿಯಾದ ರೆಸಿಪಿ! ಮಾಡಿ ನೋಡಿ.

   

ಧನ್ಯವಾದಗಳು.

Leave a Reply

Your email address will not be published.